ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಂತ ಸಿನಿಮಾ. ಐದು ಭಾಷೆಗಳಲ್ಲಿ ತಯಾರಾದ ಈ ಸಿನಿಮಾ ವಿದೇಶಗಳಲ್ಲಿ ಕೂಡಾ ಹೆಸರು ಮಾಡಿತ್ತು. ಇದೀಗ ಸಿನಿಪ್ರಿಯರು ಕೆಜಿಎಫ್ ಸೀಕ್ವೆಲ್ಗಾಗಿ ಕಾಯುತ್ತಿದ್ದಾರೆ.
ತೆಲುಗು ವಾಹಿನಿ ಮೇಲೆ ಕಾನೂನು ಸಮರಕ್ಕೆ ಮುಂದಾದ ಕೆಜಿಎಫ್ ತಂಡ: ಕಾರಣ ಏನು...? - KGF Movie satellite rights
ಸ್ಯಾಟಲೈಟ್ ರೈಟ್ಸ್ ಪಡೆಯದೆ ಅನಧಿಕೃತವಾಗಿ ಕೆಜಿಎಫ್ ಸಿನಿಮಾ ಪ್ರಸಾರ ಮಾಡಿದ್ದಕ್ಕೆ ತೆಲುಗು ಕೇಬಲ್ ಚಾನೆಲ್ ಒಂದರ ಮೇಲೆ ಕೆಜಿಎಫ್ ತಂಡ ಕಾನೂನು ಸಮರ ಹೂಡಲು ಮುಂದಾಗಿದೆ.
ಈ ಸಿನಿಮಾ ಸ್ಯಾಟಲೈಟ್ ರೈಟ್ಸ್ ಕನ್ನಡ ಬಿಟ್ಟರೆ ಬೇರೆ ಯಾವುದೇ ಭಾಷೆಗೆ ಮಾರಾಟವಾಗಿಲ್ಲ. ಆದರೆ ತೆಲುಗಿನ ಕೇಬಲ್ ಚಾನೆಲ್ವೊಂದು ಅನಧಿಕೃತವಾಗಿ ಕೆಜಿಎಫ್ ಸಿನಿಮಾವನ್ನು ಆಗ್ಗಾಗ್ಗೆ ಪ್ರಸಾರ ಮಾಡುತ್ತಿದ್ದು ಈ ವಿಚಾರ ಕೆಜಿಎಫ್ ತಂಡದ ಗಮನಕ್ಕೆ ಬಂದಿದೆ. ಇದೀಗ ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಆ ತೆಲುಗು ಕೇಬಲ್ ಚಾನೆಲ್ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದು ವಾಹಿನಿಗೆ ಸಮನ್ಸ್ ಕಳಿಸಲು ನಿರ್ಧರಿಸಿದೆ.
ಕೆಜಿಎಫ್ ಸಿನಿಮಾ ಸಂಪೂರ್ಣ ಹಕ್ಕು ನಮ್ಮ ಬಳಿ ಇದ್ದು ಸ್ಯಾಟಲೈಟ್ ರೈಟ್ಸ್ ಬಗ್ಗೆ ಈ ಚಾನೆಲ್ನೊಂದಿಗೆ ಮಾತುಕತೆ ಇನ್ನೂ ಅಂತಿಮ ಹಂತದಲ್ಲಿತ್ತು. ಆದರೂ ಈ ಚಾನೆಲ್ ಅನಧಿಕೃತವಾಗಿ ಸಿನಿಮಾವನ್ನು ಪ್ರಸಾರ ಮಾಡಿದೆ. ಈ ಬಗ್ಗೆ ನಮ್ಮಲ್ಲಿ ಪುರಾವೆಗಳಿದ್ದು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಇದಕ್ಕೆ ಆ ವಾಹಿನಿ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕು.