ಕನ್ನಡ ಚಿತ್ರರಂಗದ ಸಾಹಸ ಕಲಾವಿದರ ಬಳಗವನ್ನು ಹೆಮ್ಮೆ ಪಡುವಂತೆ ಮಾಡಿದ ಸಾಹಸ ನಿರ್ದೇಶಕ ವಿಕ್ರಮ್ ಮೋರ್ 2003ರಿಂದ ಸ್ವತಂತ್ರ ಸಾಹಸ ನಿರ್ದೇಶಕನಾಗಿ ಕರಿಯರ್ ಆರಂಭಿಸಿದವರು. ‘ಕೆಜಿಎಫ್’ ಚಿತ್ರದ ಆ್ಯಕ್ಷನ್ ಕೊರಿಯೋಗ್ರಫಿಗಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದುಕೊಟ್ಟವರು.
ವೃತ್ತಿ ಜೀವನದ ಅನುಭವ ಹಂಚಿಕೊಂಡ ಕೆಜಿಎಫ್ ಸಾಹಸ ನಿರ್ದೇಶಕ ವಿಕ್ರಮ್ ಮೋರ್ - ರಕ್ಷಿತ್ ಶೆಟ್ಟಿ
66ನೇ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಕೆಜಿಎಫ್ಗೆ ಅತ್ಯುತ್ತಮ ಗ್ರಾಫಿಕ್ಸ್ ಹಾಗೂ ಅತ್ಯುತ್ತಮ ಆ್ಯಕ್ಷನ್ ಕೊರಿಯೋಗ್ರಫಿಗಾಗಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದೆ. ಚಿತ್ರಕ್ಕೆ ಸ್ಟಂಟ್ ಕೊರಿಯೋಗ್ರಫಿ ಮಾಡಿದ ವಿಕ್ರಮ್ ಮೋರ್ ಫೈಟ್ ಕಲಿತದ್ದು ಯೂಟ್ಯೂಬ್ ನೋಡಿಕೊಂಡು ಎಂದು ಅವರೇ ಹೇಳಿಕೊಂಡಿದ್ದಾರೆ.
ವಿಕ್ರಮ್ ಅವರನ್ನು ಈ ಬಗ್ಗೆ ಕೇಳಿದರೆ 'ನಾನು ಎಲ್ಲವನ್ನೂ ಕಲಿತದ್ದು ಯೂಟ್ಯೂಬ್ ನೋಡಿಕೊಂಡು' ಎಂದು ಹೇಳುತ್ತಾರೆ. ನಾನು ಹೆಚ್ಚು ಓದಿಲ್ಲ, ಎಸ್ಎಸ್ಎಲ್ಸಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದೇನೆ. ನಮ್ಮ ಮೂಲ ನೇಪಾಳ. ಬಹಳ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಈ ಸಾಹಸ ವೃತ್ತಿ ಆರಂಭಿಸಿದೆ. ಸುಮಾರು 500 ಸಿನಿಮಾಗಳಿಗೆ ನಾನು ಫೈಟರ್ ಅಗಿ ಕೆಲಸ ಮಾಡಿದ್ದೇನೆ. ಆದರೆ ಅದು ಸುಲಭದ ಕೆಲಸವಲ್ಲ. ಕೈ-ಕಾಲು ಮುರಿದುಹೋಗುವಂತಹ ರಿಸ್ಕ್ ಕೆಲಸ. ರಾಷ್ಟ್ರಪ್ರಶಸ್ತಿ ಬಂದ ಮೇಲೆ ನನಗೆ ಹೆಚ್ಚಿನ ಗೌರವ ಹಾಗೂ ವೃತ್ತಿ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ.
ಸ್ವತಂತ್ಯ್ರ ಸಾಹಸ ನಿರ್ದೇಶಕ ಆಗಿ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ವಿಕ್ರಮ್ ಬಳಿ ಸುಮಾರು ಸ್ಟಂಟ್ ಮಾಡುವ 35 ಮಂದಿ ಇದ್ದಾರಂತೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ವಿಕ್ರಮ್ ಫೈಟ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಎಲ್ಲಾ ಸೂಪರ್ಸ್ಟಾರ್ಗಳ ಜೊತೆ ಕೆಲಸ ಮಾಡಿದ ಹೆಮ್ಮೆ ಇದೆ ಎನ್ನುತ್ತಾರೆ ವಿಕ್ರಮ್. ಸಾಹಸ ಕಲಾವಿದರಿಗೆ ಕೂಡಾ ಉತ್ತಮ ಸ್ಥಾನಮಾನ ಸಿಗಬೇಕು ಎಂಬುದು ವಿಕ್ರಮ್ ಅವರ ಅಭಿಲಾಷೆಯಂತೆ.