ನಟ ಯಶ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಇನ್ನೊಂದು ಸವಾಲು ಎದುರಾಗಿದೆ. ಚಿತ್ರದ ಬಿಡುಗಡೆ ಯಾವಾಗ ಎಂದು ಚಿತ್ರತಂಡದವರು ಅಧಿಕೃತವಾಗಿ ಘೋಷಿಸದಿದ್ದರೂ ಬಹುತೇಕ ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಬಹುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಡಿಸೆಂಬರ್ ಕೊನೆಯ ವಾರ ಯಶ್ ಪಾಲಿನ ಲಕ್ಕಿ ವಾರವಂತೆ. ಈ ಹಿಂದಿನ ವರ್ಷಗಳಲ್ಲಿ ಆ ಸಮಯದಲ್ಲಿ ಬಿಡುಗಡೆಯಾದ ಯಶ್ ಅಭಿನಯದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಈ ಹಿನ್ನೆಲೆಯಲ್ಲಿ ಕೆಜಿಎಫ್-2 ಸಿನಿಮಾ ಸಹ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದೆ.
ಕ್ರಿಸ್ಮಸ್ ಸಂದರ್ಭದಲ್ಲಿ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಕಳೆದ ವರ್ಷವೇ ಘೋಷಿಸಿತ್ತು. ಇದೀಗ ಆ ಸಿನಿಮಾದ ಚಿತ್ರೀಕರಣ ಮುಗಿಯುತ್ತಾ ಬಂದಿದ್ದು, ಅಂದುಕೊಂಡಂತೆ ಅದೇ ದಿನ ಬಿಡುಗಡೆಯಾಗಲಿದೆ. ಈ ಮಧ್ಯೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರವನ್ನೂ ಕೂಡ ಅದೇ ದಿನ ಬಿಡುಗಡೆ ಮಾಡುವುದಾಗಿ ಮಂಗಳವಾರ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.