ಇದೇ 9 ರಂದು ಬಿಡುಗಡೆಯಾಗಲಿರುವ ಕೋಮಲ್ ಕುಮಾರ್ ಅವರ 'ಕೆಂಪೇಗೌಡ 2' ಸಿನಿಮಾ, ಕುರುಕ್ಷೇತ್ರ ಚಿತ್ರಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ಪಡೆದುಕೊಂಡಿದೆ. ಡಿ ಬಾಸ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಕ್ಕೆ ಕಡಿಮೆ ಚಿತ್ರಮಂದಿರ ಲಭ್ಯ ಆಗುತ್ತಿವೆ.
ಬಹುನಿರೀಕ್ಷಿತ ಕುರುಕ್ಷೇತ್ರ ದೇಶಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ನಿಜ. ಆದರೆ, ಕರ್ನಾಟಕದಲ್ಲಿ ಬಹು ತಾರಗಣದ ಈ ಪೌರಾಣಿಕ ಸಿನಿಮಾಕ್ಕೆ ಕಡಿಮೆ ಚಿತ್ರಮಂದಿರಗಳು ಸಿಗಲಿವೆ.
ಇದಕ್ಕೆ ಕಾರಣ ಏನು?
ಕುರುಕ್ಷೇತ್ರ ಚಿತ್ರಕ್ಕೆ ಅಲ್ಪ ಥಿಯೇಟರ್ಗಳು ಲಭ್ಯವಾಗುತ್ತಿರುವುದಕ್ಕೆ ಕಾರಣ ತಂಡದ ವ್ಯಾಪಾರದ ನೀತಿಯಂತೆ. ಕರ್ನಾಟಕದಲ್ಲಿ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 3ಡಿ ಹಾಗೂ 2ಡಿ ವರ್ಷನ್ ಬಿಡುಗಡೆ ಆಗುತ್ತದೆ ಎಂಬ ಲೆಕ್ಕಾಚಾರ ಈಗ ತಲೆಕೆಳಕಾಗುತ್ತಿದೆ. ಯಾಕಂದರೆ ಚಿತ್ರಮಂದಿರಗಳು ‘ಕುರುಕ್ಷೇತ್ರ’ ಸಿನಿಮಾ ಪಡೆಯ ಬೇಕಾದರೆ ಎಂದಿಗಿಂತ 3 ಪಟ್ಟು ಹೆಚ್ಚು ಹಣ ಕೊಡಬೇಕು. ಅಂದರೆ ಒಂದು ಚಿತ್ರಮಂದಿರ 5 ಲಕ್ಷ ನೀಡುವ ಬದಲು 15 ಲಕ್ಷ ಮೊದಲೇ ನೀಡಿ ಚಿತ್ರವನ್ನು ಪಡೆಯಬೇಕಂತೆ. ನಿರ್ಮಾಪಕ ಮುನಿರತ್ನ ನಾಯ್ಡು ಹಾಗೂ ರಾಕ್ಲೈನ್ ವೆಂಕಟೇಶ್ ಅನುಸರಿಸಿರುವ ಈ ನೀತಿ ಪ್ರದರ್ಶಕ ವಲಯಕ್ಕೆ ಕಷ್ಟ ಎನಿಸಿದೆ. ಒಂದು ವಾರಕ್ಕೆ ₹5 ಲಕ್ಷ ಬದಲು ₹15 ಲಕ್ಷ ನೀಡುವುದು ಹೊರೆಯಾಗಿದೆ. ಹಾಗಾಗಿ ಅನೇಕ ಚಿತ್ರಮಂದಿರಗಳು ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ 200 ಕ್ಕೂ ಹೆಚ್ಚು ಚಿತ್ರಮಂದಿರಗಳು ಸಲೀಸಾಗಿ ಕೋಮಲ್ ಕುಮಾರ್ ಅವರ ಕೆಂಪೇಗೌಡ 2 ಚಿತ್ರಕ್ಕೆ ಸಿಕ್ಕಿದೆ.