ಕನ್ನಡ ಚಿತ್ರರಂಗದ ಹೆಮ್ಮಯ ನಿರ್ದೇಶಕ ಗಿರೀಶ್ ಕಾಸರವಳ್ಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿರ್ದೇಶಕರಿಗೆ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರವು ಮತ್ತಷ್ಟು ಖುಷಿಯನ್ನ ಹೆಚ್ಚಿಸಿದೆ. ಯಾಕಂದ್ರೆ ಈ ಚಿತ್ರವು, ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ.
2021ರ ಜನವರಿ 16ರಂದು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಭಾಗವಹಿಸಲಿದೆ. ಜನವರಿಯಲ್ಲೇ ರೋಂನಲ್ಲಿ ನಡೆಯಲಿರುವ ಏಷ್ಯಾಟಿಕಾ ಚಲನ ಚಿತ್ರೋತ್ಸವದಲ್ಲಿಯೂ ಈ ಚಿತ್ರ ಸ್ಪರ್ಧೆ ಮಾಡಲಿದೆ.
ವಿದೇಶಿ ಚಿತ್ರೋತ್ಸವಗಳಿಗೆ ಆಯ್ಕೆಯಾಯ್ತು ಕಾಸರವಳ್ಳಿಯ ಈ ಸಿನಿಮಾ ಬಹುಮುಖ ಪ್ರತಿಭೆಯ ಕವಿ, ಸಾಹಿತಿ, ನಾಟಕಕಾರ, ಜನಪ್ರಿಯ ಗೀತ ರಚನಕಾರ ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ' ಕಥೆಯನ್ನು ಆಧರಿಸಿ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ನಾಲ್ಕು ಮಕ್ಕಳಾದ ದ್ರುಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತು ನಲ್ಮೆ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕರಾವಳಿಯ ಬದುಕು ಕಟ್ಟಿಕೊಡುವ ಚಿತ್ರದ ಭಾಗವನ್ನು ಉಡುಪಿಯ ಸುತ್ತಮುತ್ತ ಹಾಗೂ ಕೆಲವು ಭಾಗಗಳನ್ನು ಬೆಂಗಳೂರಿನಲ್ಲೂ ಚಿತ್ರೀಕರಿಸಲಾಗಿದೆ. ದ್ವೀಪ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್. ಗುಣ ಶೇಖರನ್ ಅವರ ಸಂಕಲನ ಇದ್ದು, ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನ ಇದೆ. ಅಲ್ಲದೇ ಚಿತ್ರಕ್ಕೆ ಕಿಲಾಡಿ ಕಿಟ್ಟು ಸಿನಿಮಾ ಮಾಡಿದ ನಿರ್ಮಾಪಕ ಎಸ್. ವಿ. ಶಿವಕುಮಾರ್ ಅವರು ತಮ್ಮ ಸಂಗಮ ಫಿಲ್‍ಂಸ್ ಲಾಂಛನದಲ್ಲಿ, ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.