ಕನ್ನಡ ಚಿತ್ರರಂಗದಲ್ಲಿ ಟೈಟಲ್ನಿಂದಲೇ ಗಮನ ಸೆಳೆಯುತ್ತಿರೋ ಚಿತ್ರ 'ಕರ್ಮಣ್ಯೇವಾಧಿಕಾರಸ್ತೇ'. ಇದರರ್ಥ 'ನೀನು ನಿನ್ನ ಕೆಲಸ ಮಾಡು ಫಲಾಫಲಗಳನ್ನು ನನಗೆ ಬಿಡು' ಅಂತಾ. ಯುವ ನಟ ಪ್ರತೀಕ್ ಸುಬ್ರಮಣಿ ಅಭಿನಯದ, ಕರ್ಮಣ್ಯೇವಾಧಿಕಾರಸ್ತೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಗರದ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ನೆರವೇರಿತು. ಧಾರವಾಡ ಶಾಸಕ ಅರವಿಂದ್ ಬೆಲ್ಲದ್ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಈ ಚಿತ್ರದ ನಾಯಕ ಪ್ರತೀಕ್ ಚಿಕ್ಕಂದಿನಿಂದಲೂ ಪರಿಚಯ. ಅವನು ಸಿನಿಮಾಗೆ ಬರುತ್ತಾನೆ ಎಂದು ತಿಳಿದಾಗ ಇವನಿಗೆ ಏಕೆ ಬೇಕು ಅಂದುಕೊಂಡಿದ್ದೆ. ಈಗ ಟ್ರೇಲರ್ ನೋಡಿ ಸಂತಸವಾಯಿತು. ಎಲ್ಲರ ಶ್ರಮ ಈ ಟ್ರೇಲರ್ನಲ್ಲೇ ಕಾಣುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಾನು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ
ಇನ್ನು ಈ ಚಿತ್ರದ ನಾಯಕ, ಪ್ರತೀಕ್ ಸುಬ್ರಮಣಿ ಮಾತನಾಡಿ, ನಾನು ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಹಾಗೂ ನಿರ್ದೇಶಕ ಶ್ರೀಹರಿ ಆನಂದ್ ಕಿರುಚಿತ್ರವೊಂದರ ಮೂಲಕ ಪರಿಚಿತರಾದೆವು. ಅಂದಿನಿಂದ ಈ ಚಿತ್ರ ಹಿಡಿದುಕೊಂಡು ಸಾಕಷ್ಟು ಅಲೆದಿದ್ದೇವೆ. ಕೊನೆಗೆ ದೇವರ ಹಾಗೆ ನಿರ್ಮಾಪಕ ರಮೇಶ್ ರಾಮಯ್ಯ ಸಿಕ್ಕರು. ನಂತರ ಚಿತ್ರ ಆರಂಭವಾಯಿತು. ಮಧ್ಯೆ ಕೊರೊನಾದಿಂದ ಸಾಕಷ್ಟು ಅಡೆತಡೆಗಳು ಎದುರಾದವು. ಕೊನೆಗೆ ಚಿತ್ರ ನಿರ್ಮಾಣ ಹಂತಕ್ಕೆ ಬಂದಿದೆ. ಟ್ರೇಲರ್ಗಿಂತ ಹತ್ತು ಪಟ್ಟು ಸಿನಿಮಾ ಚೆನ್ನಾಗಿದೆ ಎಂಬ ಭರವಸೆ ಇದೆ ಅಂದರು.
ನಾನು ಹಾಗೂ ಪ್ರತೀಕ್ ಸುಬ್ರಮಣಿ ಸಿನಿರಂಗದಲ್ಲಿ ಒಟ್ಟಿಗೆ ಸೈಕಲ್ ತುಳಿದವರು. ಕಥೆ ಸಿದ್ಧ ಮಾಡಿಕೊಂಡಾಗ ಚಿತ್ರದ ಶೀರ್ಷಿಕೆ ಏನಿಡಬೇಕು ಎಂಬ ಚರ್ಚೆ. ಕೊನೆಗೆ ಪ್ರತೀಕ್ ಈ ಹೆಸರು ಸೂಚಿಸಿದರು. ಚಿತ್ರ ನಿರ್ಮಾಣಕ್ಕೆ ಯಾರು ಸಿಗದಿದ್ದಾಗ, ಆಪತ್ಭಾಂಧವನಂತೆ ಬಂದವರು ರಮೇಶ್ ರಾಮಯ್ಯ ಅವರಿಗೆ ನಮ್ಮ ಧನ್ಯವಾದ ಎಂದರು. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲೇ ಹೆಚ್ಚು ಭಾಗ, ಮಿಕ್ಕ ಭಾಗ ದಾಂಡೇಲಿಯಲ್ಲಿ ನಡೆದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ನನ್ನೊಡನೆ ಸಹಕರಿಸಿದ ಚಿತ್ರತಂಡಕ್ಕೆ ಸಾವಿರ ಧನ್ಯವಾದ ಎಂದರು ನಿರ್ದೇಶಕ ಶ್ರೀಹರಿ ಆನಂದ್.