ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಕನ್ನಡಿಗ' ಚಿತ್ರದ ಚಿತ್ರೀಕರಣ ಕಳೆದ ವರ್ಷ ಪ್ರಾರಂಭವಾಗಿ, ಆ ನಂತರ ಸೆನ್ಸಾರ್ ಮುಗಿದು ಬಿಡುಗಡೆಗೆ ಸಜ್ಜಾಗಿದ್ದ ವಿಷಯ ಗೊತ್ತಿರಬಹುದು. ಈಗ ಚಿತ್ರವನ್ನು ಮತ್ತೊಮ್ಮೆ ಸೆನ್ಸಾರ್ ಮಾಡಿಸಿ, ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.
ಹೌದು, ಕಳೆದ ವರ್ಷವೇ ಚಿತ್ರ ಸೆನ್ಸಾರ್ ಆಗಿದ್ದರೂ, ಈಗ ಪುನಃ ಮತ್ತೊಮ್ಮೆ ಸೆನ್ಸಾರ್ ಆಗುತ್ತಿರುವುದಕ್ಕೆ ಕಾರಣವಿದೆ. ಅದೇನೆಂದರೆ, ಎರಡು ಹಾಡುಗಳನ್ನು ಹೊಸದಾಗಿ ಚಿತ್ರದಲ್ಲಿ ಸೇರ್ಪಡೆ ಮಾಡಲಾಗಿದೆಯಂತೆ. ಅದರ ಜೊತೆಗೆ ರವಿಚಂದ್ರನ್ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಅವರ ಡಬ್ಬಿಂಗ್ ಮುಗಿದಿದ್ದು, ಈ ವಿಷಯವನ್ನು ನಿರ್ದೇಶಕ ಗಿರಿರಾಜ್ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.
ಈಗ ಚಿತ್ರತಂಡದವರು ಸೆನ್ಸಾರ್ಗೆ ಮನವಿ ಸಲ್ಲಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಸೆನ್ಸಾರ್ ಆದರೆ, ಆಗ ಚಿತ್ರವನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಇದಕ್ಕೂ ಮುನ್ನ ಈ ವರ್ಷ ರವಿಚಂದ್ರನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿತ್ತು. ಈಗ ಹೇಗೂ ನವೆಂಬರ್ ತಿಂಗಳು ಬಂದಿರುವುದರಿಂದ ಮತ್ತು ಚಿತ್ರವು ಕನ್ನಡದ ಕುರಿತಾಗಿದ್ದರಿಂದ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವದ ನೆಪದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.
'ಕನ್ನಡಿಗ'ದಲ್ಲಿ ರವಿಚಂದ್ರನ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಆ ಪೈಕಿ ಒಂದು ಪಾತ್ರವು ಲಿಪಿಕಾರನ ಕುರಿತದ್ದಾಗಿದೆ. ಕನ್ನಡ ನಿಘಂಟು ತಜ್ಞ ಕಿಟೆಲ್ ಪಾತ್ರವೂ ಚಿತ್ರದಲ್ಲಿದ್ದು, ಅದನ್ನು ಜೇಮಿ ಆಲ್ಟರ್ ಮಾಡಿದ್ದಾರೆ. ಇನ್ನುಳಿದಂತೆ ಪಾವನಾ ಗೌಡ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಮುಂತಾದವರು ನಟಿಸಿದ್ದಾರೆ. ಜಟ್ಟ ಗಿರಿರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಜಟ್ಟ ಮತ್ತು ಮೈತ್ರಿ ಚಿತ್ರಗಳನ್ನು ನಿರ್ಮಿಸಿರುವ ಎನ್.ಎಸ್. ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ಹಣ ಹೂಡಿಕೆ ನೆಪದಲ್ಲಿ ವಂಚನೆ: ಸ್ನೇಹಿತರ ವಿರುದ್ಧ ನಟಿ ಸಂಜನಾ ಪೊಲೀಸರಿಗೆ ದೂರು