2021ನೇ ವರ್ಷದಲ್ಲೂ ಕೊರೊನಾ ಎಂಬ ಹೆಮ್ಮಾರಿಯ ಆಟ ಮುಂದುವರೆದಿತ್ತು. ಕನ್ನಡ ಚಿತ್ರರಂಗದ ಮೇಲೆ ಕೊರೊನಾ ಕರಿ ನೆರಳು ಆವರಿಸಿದ್ದರೂ ಕೂಡ, 100ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿವೆ.
ಆದರೆ, ಈ ಪೈಕಿ ಸಕ್ಸಸ್ ಜೊತೆಗೆ ಪ್ರೇಕ್ಷಕರ ಮನೆಗೆದ್ದಿರೋದು ಬೆರಳಣಿಕೆಯಷ್ಟು ಸಿನಿಮಾಗಳು ಮಾತ್ರ. ಹಾಗಾದ್ರೆ, 2021ರಲ್ಲಿ ಸೂಪರ್ ಹಿಟ್ ಜೊತೆಗೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನಿಮಾಗಳು ಯಾವುವು ನೋಡೋಣ ಬನ್ನಿ.
2021ನೇ ವರ್ಷ ಶುರುವಾಗುತ್ತಿದ್ದಂತೆ ಕೊರೊನಾ ಭಯದ ನಡುವೆಯೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ರಾಘವೇಂದ್ರ ರಾಜ್ಕುಮಾರ್ ಅಭಿನಯದ 'ರಾಜತಂತ್ರ'. ಅನಾರೋಗ್ಯದ ಮಧ್ಯೆಯೂ ರಾಘವೇಂದ್ರ ರಾಜ್ಕುಮಾರ್ ನಟಿಸಿರೋ ಈ ಚಿತ್ರ ನೋಡಲು ಪ್ರೇಕ್ಷಕರು ಮಾತ್ರ ಥಿಯೇಟರ್ ಕಡೆ ಬರುವ ಮನಸ್ಸು ಮಾಡಲಿಲ್ಲ.
ಆದರೆ, ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರು ಬರುವಂತೆ ಮಾಡಿದ್ದು, ಅನೀಶ್ ತೇಜೇಶ್ವರ್ ಅಭಿನಯದ 'ರಾಮಾರ್ಜುನ' ಸಿನಿಮಾ. ಈ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದರು ಕೂಡ ಅಂದುಕೊಂಡ ಮಟ್ಟಿಗೆ ಸಕ್ಸಸ್ ಮಾಡಲಿಲ್ಲ.
ಇದೇ ಹಾದಿಯಲ್ಲಿ ಬಂದ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ ಪೆಕ್ಟರ್ ವಿಕ್ರಂ' ಹಾಗೂ ಚಂದನ್ ಆಚಾರ್ ನಟನೆಯ 'ಮಂಗಳವಾರ ರಜಾದಿನ' ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆದರೂ ಕೂಡ ಗಲ್ಲಾ ಪೆಟ್ಟಿಗೆ ತುಂಬಲಿಲ್ಲ.
ಇನ್ನು ದೊಡ್ಡ ಸ್ಟಾರ್ ಸಿನಿಮಾ ಅಂತಾ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಲೆಕ್ಷನ್ ಮಾಡಿದ ಸಿನಿಮಾ 'ಪೊಗರು'. ನಂದ ಕೀಶೋರ್ ನಿರ್ದೇಶನದಲ್ಲಿ ಮೂಡಿಬಂದ ಪೊಗರು ಚಿತ್ರ, ಈ ವರ್ಷದ ಮೊದಲ ಬಾಕ್ಸಾಫೀಸ್ ಹಿಟ್ ಚಿತ್ರ ಅಂತಾ ಕರೆಯಬಹುದು.
ಧ್ರುವ ಸರ್ಜಾರ ವಿಭಿನ್ನ ಗೆಟಪ್ ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗಿ, ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಡಾಲಿ ಧನಂಜಯ್, ರಶ್ಮಿಕಾ ಮಂದಣ್ಣ, ಮಯೂರಿ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವಿತ್ತು.
ಈ ಸಿನಿಮಾ ಸಕ್ಸಸ್ ಬಳಿಕ, ಅಂಬಾನಿ ಪುತ್ರ, ಸೈನೈಡ್ ಮಲ್ಲಿಕಾ, ಕುಷ್ಕ, ರಕ್ತ ಗುಲಾವಿ ಅಂತಾ ಸಾಕಷ್ಟು ಹೊಸಬರ ಸಿನಿಮಾಗಳು ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ಆದರೆ, ಪ್ರೇಕ್ಷಕರಿಗೆ ಇಷ್ಟ ಆಗಲಿಲ್ಲ.
ಇನ್ನು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದು ದರ್ಶನ್ ಅಭಿನಯದ 53ನೇ ಸಿನಿಮಾ 'ರಾಬರ್ಟ್'. ನಿರ್ದೇಶಕ ತರುಣ್ ಕಿಶೋರ್ ನಿರ್ದೇಶನದ ರಾಬರ್ಟ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿ ಹಿಟ್ ಸಿನಿಮಾ ಅಂತಾ ಕರೆಯಿಸಿಕೊಂಡಿತ್ತು.
ಇದನ್ನೂ ಓದಿ:2021ರಲ್ಲಿ ಬದುಕಿನ ಪಯಣ ಮುಗಿಸಿದ ಚಂದನವನದ ತಾರೆಯರಿವರು!
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಕಾಂಬಿನೇಷನ್‌ನಲ್ಲಿ ಬಂದ'ಯುವರತ್ನ' ಸಿನಿಮಾ, ಈ ವರ್ಷದ ಹಿಟ್ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿತ್ತು.
ಅಭಿ ಚಿತ್ರದ ನಂತರ ಪುನೀತ್ ಈ ಚಿತ್ರದಲ್ಲಿ ಕಾಲೇಜು ಯುವಕನಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದರು. ಈ ಚಿತ್ರ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿರುವಾಗಲೇ ಲಾಕ್ಡೌನ್ ಕಾರಣ ಒಟಿಟಿಯಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು.
ಲಾಕ್ಡೌನ್ ಸಡಿಲಿಕೆ ಬಳಿಕ ಬಿಡುಗಡೆ ಆದ ಸಿನಿಮಾ 'ನಿನ್ನ ಸನಿಹಕೆ'. ಡಾ. ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ, ಸೂರಜ್ ಗೌಡ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯ್ತು. ಆದರೆ, ಅಂದುಕೊಂಡ ಮಟ್ಟಿಗೆ ಕಲೆಕ್ಷನ್ ಆಗಲಿಲ್ಲ.
ಇನ್ನು ದುನಿಯಾ ವಿಜಯ್ ನಟನೆ ಜೊತೆಗೆ ನಿರ್ದೇಶನ ಮಾಡಿದ ಚಿತ್ರ 'ಸಲಗ'. ಭೂಗತ ಲೋಕದ ರೌಡಿಸಂ ಕಥೆ ಆಧರಿಸಿರೋ ಸಲಗ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗಿ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಗಳಿಸುವ ಮೂಲಕ ಹಿಟ್ ಆಯಿತು.
ಈ ಸಿನಿಮಾ ಬಳಿಕ ಒಂದಿಷ್ಟು ವಿವಾದಿಂದ ಗಮನ ಸೆಳೆದ ಸಿನಿಮಾ 'ಕೋಟಿಗೊಬ್ಬ 3'. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ಕೂಡ, ಪ್ರೇಕ್ಷಕರಿಗೆ ಇಷ್ಟ ಆಗಿ ಒಳ್ಳೆ ಗಳಿಕೆ ಮಾಡಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಶನ್ನಲ್ಲಿ ಮೂಡಿ ಬಂದಿದ್ದು'ಭಜರಂಗಿ 2'ಸಿನಿಮಾ. ಈ ಚಿತ್ರ ಅದ್ಭುತ ಗ್ರಾಫಿಕ್ಸ್ ಹೊಂದಿತ್ತು. ಆದರೆ, ತೆರೆಕಂಡ ದಿನವೇ ಪುನೀತ್ ರಾಜ್ಕುಮಾರ್ ನಮ್ಮನ್ನ ಅಗಲಿದರು. ಅಪ್ಪುವಿನ ಅಕಾಲಿಕ ನಿಧನದಿಂದ ಸ್ವಲ್ಪ ಹಿನ್ನಡೆ ಅನುಭವಿಸಿ ನಂತರ ಮತ್ತೆ ಅದ್ಭುತ ಪ್ರದರ್ಶನ ಕಂಡಿತು.
ಇನ್ನು ನವೆಂಬರ್ನಲ್ಲಿ ಬಿಡುಗಡೆಯಾದ ರಿಷಭ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ'ಗರುಡ ಗಮನ ವೃಷಬ ವಾಹನ', ರಮೇಶ್ ಅರವಿಂದ್ ಅಭಿನಯದ '100' ಸಿನಿಮಾ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಸಖತ್' ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಇನ್ನು ಶ್ರೀಮುರಳಿ ಅಭಿನಯದ 'ಮದಗಜ', ರವಿಚಂದ್ರನ್ ಅಭಿನಯದ 'ದೃಶ್ಯ2', ನಿಖಿಲ್ ಕುಮಾರಸ್ವಾಮಿ ಅಭಿನಯದ 'ರೈಡರ್', ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾಗಳು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿ ಹಿಟ್ ಸಿನಿಮಾಗಳು ಎನಿಸಿವೆ.
ಈ ವರ್ಷದ ಕೊನೆಯಲ್ಲಿ, ಅಂದರೆ ಡಿಸೆಂಬರ್ 31ರಂದು ಅಜಯ್ ರಾವ್ ಅಭಿನಯದ 'ಲವ್ ಯು ರಚ್ಚು', ಪ್ರಜ್ವಲ್ ದೇವರಾಜ್ ಅಭಿನಯದ 'ಅರ್ಜುನ್ ಗೌಡ' ಹಾಗೂ ದಿಗಂತ್ ನಟಿಸಿರೋ 'ಹುಟ್ಟು ಹಬ್ಬದ ಶುಭಾಶಯಗಳು' ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಒಟ್ಟಾರೆ 2021ರಲ್ಲಿ ಕೊರೊನಾ ಭಯದ ಮಧ್ಯೆ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನಗೆದ್ದು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿವೆ.