ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಮಹಾದೇವಿಯು ಇದೀಗ ಒಡಿಯಾ ಭಾಷೆಗೆ ರಿಮೇಕ್ ಆಗಲಿದೆ.
2015ರಲ್ಲಿ ಆರಂಭವಾಗಿದ್ದ ಈ ಧಾರಾವಾಹಿಯು ಬರೋಬ್ಬರಿ 1000 ಸಂಚಿಕೆಗಳನ್ನು ಪೂರೈಸಿತ್ತು. ಇದೀಗ ಈ ಧಾರಾವಾಹಿಯು ಒಡಿಯಾಕ್ಕೆ ರಿಮೇಕ್ ಆಗಿ ಬರುತ್ತಿರುವುದು ಕನ್ನಡ ಕಿರುತೆರೆ ವೀಕ್ಷಕರಿಗೆ ನಿಜಕ್ಕೂ ಸಂತಸದ ವಿಚಾರ. ಈ ಸಂತಸದ ಸುದ್ದಿಯನ್ನು ಸ್ವತಃ ಶೃತಿ ನಾಯ್ಡು ಹಂಚಿಕೊಂಡಿದ್ದಾರೆ. "ನಮ್ಮ ಮಹಾದೇವಿ ಧಾರಾವಾಹಿ ಒಡಿಯಾ ಭಾಷೆಯಲ್ಲಿ ರಿಮೇಕ್ ಆಗಲಿದೆ. ಇದು ನಿಜವಾಗಿಯೂ ತುಂಬಾ ಸಂತಸದ ವಿಚಾರ. ನಮ್ಮ ಕನ್ನಡ ಧಾರಾವಾಹಿ ಪರಭಾಷೆಗೆ ರಿಮೇಕ್ ಆಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಮಹಾದೇವಿಯನ್ನು ಜೀ ಕನ್ನಡ ಈಗ ಬೇರೆ ಭಾಷೆಯಲ್ಲಿ ಮಾಡಲಿದೆ. ನಮ್ಮ ಧಾರಾವಾಹಿಗೆ ಪ್ರೀತಿ ಪ್ರೋತ್ಸಾಹ ತೋರಿದ್ದಕ್ಕೆ ಧನ್ಯವಾದಗಳು" ಎಂದು ಶೃತಿ ನಾಯ್ಡು ಬರೆದುಕೊಂಡಿದ್ದಾರೆ.
ರಮೇಶ್ ಇಂದಿರಾ ನಿರ್ದೇಶಿಸಿದ್ದ ಈ ಧಾರಾವಾಹಿಯು ಧಾರ್ಮಿಕ ಹಾಗೂ ನಿಗೂಢ ಅಂಶಗಳನ್ನು ಒಳಗೊಂಡಿತ್ತು. ನಾಸ್ತಿಕತೆಯಿಂದ ಆಸ್ತಿಕತೆಗೆ ಬದಲಾಗುವ ಹುಡುಗಿಯ ಕಥೆಯನ್ನು ಹೊಂದಿದ್ದ ಮಹಾದೇವಿ ಧಾರಾವಾಹಿಯ ವಿಭಿನ್ನ ಕಥಾ ಹಂದರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಹಳ್ಳಿ ಹುಡುಗಿ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಸ್ವಚ್ಛ ಮಾಡುವುದು, ಅಲಂಕಾರ ಹೀಗೆ ಕೆಲಸ ಮಾಡಿಕೊಂಡಿರುತ್ತಾಳೆ. ಆಕೆಗೆ ದೇವಸ್ಥಾನವೇ ಪ್ರಪಂಚ.
ದೇವಾಲಯದಲ್ಲಿ ನಡೆಯುವ ಅನ್ಯಾಯದ ವಿರುದ್ದ ಪ್ರತಿಭಟನೆ ಮಾಡುವ ಅವಳು ದೇವಿಯನ್ನು ನಂಬಲು ನಿರಾಕರಿಸಿದಾಗ ಕಥೆ ತಿರುವು ಪಡೆದುಕೊಳ್ಳುತ್ತದೆ. ಮಾನಸ ಜೋಶಿ ದೇವಿ ಮಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿ ತ್ರಿಪುರ ಸುಂದರಿಯಾಗಿ ಅರ್ಚನಾ ಜೋಯಿಸ್ ನಟಿಸಿದ್ದರು. ಇದರ ಜೊತೆಗೆ ವಿನಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.