ಬೆಂಗಳೂರು ಎಂಬ ಮಾಯಾನಗರಿ ಬಗ್ಗೆ ಹಲವಾರು ಸಿನಿಮಾ ಬಂದಿವೆ. ಇದೀಗ 'ಮೇಡ್ ಇನ್ ಬೆಂಗಳೂರು' ಟೈಟಲ್ ಇಟ್ಟುಕೊಂಡು, A million dreams, One city ಎಂಬ ಅಡಿಬರಹವಿರುವ ಚಿತ್ರವೊಂದು ಬರ್ತಿದೆ.
ಕನ್ನಡ ಚಿತ್ರರಂಗದ ಪ್ರಮುಖ ನಟರಾದ ಅನಂತನಾಗ್, ಸಾಯಿಕುಮಾರ್ ಹಾಗೂ ಪ್ರಕಾಶ್ ಬೆಳವಾಡಿ ಮೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಯುವ ನಟನಾಗಿ ಮಧುಸೂದನ್ ಗೋವಿಂದ್ ಅಭಿನಯ ಮಾಡಿದ್ದಾರೆ. ಯುವ ನಿರ್ದೇಶಕ ಪ್ರದೀಪ್ ಶಾಸ್ತ್ರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡುತ್ತಿರುವ ಅನಂತ್ ನಾಗ್ ಮಾತನಾಡಿ, ಕೆಲವು ತಿಂಗಳುಗಳ ಹಿಂದೆ ನಿರ್ಮಾಪಕ ಬಾಲಕೃಷ್ಣ ಮತ್ತು ನಿರ್ದೇಶಕ ಪ್ರದೀಪ್ ಶಾಸ್ತ್ರಿ ಈ ಚಿತ್ರದ ಸಂಬಂಧ ಮನೆಗೆ ಬಂದಿದ್ದರು. ಪ್ರದೀಪ್ ಕೊಟ್ಟ ಸ್ಕ್ರಿಪ್ಟ್ ಓದಿದೆ. ಬಹಳ ಖುಷಿಯಾಯಿತು. ನನ್ನದು ಇದರಲ್ಲಿ ಹೀರಾ ನಂದಾನಿ ಎಂಬ ಸಿಂಧಿ ವ್ಯಾಪಾರಿಯ ಪಾತ್ರ.
ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ. ನನಗೆ ಒಬ್ಬ ಸಿಂಧಿ ವ್ಯಾಪಾರಿಯ ಪರಿಚಯವಿತ್ತು. ಅವರೇ ಖ್ಯಾತ ನಿರ್ಮಾಪಕ ಮತ್ತು ವಿತರಕ ಪಾಲ್ ಚಂದಾನಿ. ಅವರ ಮ್ಯಾನರಿಸಂ ಬಳಸಿಕೊಳ್ಳಬಹುದಾ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಒಪ್ಪಿದರು. ಅವರ ಮಾತಿನ ಧಾಟಿ ಮತ್ತು ಮ್ಯಾನರಸಿಂಗಳನ್ನು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಂಡಿದ್ದೇನೆ ಎಂದು ಹಿರಿಯ ನಟ ಅನಂತನಾಗ್ ಹೇಳಿದರು.
ಈ ಚಿತ್ರದ ಕುರಿತು ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತನಾಡಿ, ಈ ಚಿತ್ರವನ್ನು ನಾನು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಅನಂತ್ ನಾಗ್ ಮತ್ತು ಪ್ರಕಾಶ್ ಬೆಳವಾಡಿ ಎಂದರೆ ತಪ್ಪಿಲ್ಲ. ಈ ಚಿತ್ರದಲ್ಲಿ ಅವರ ಜೊತೆಗೆ ನಟಿಸುವುದಕ್ಕೆ ಅವಕಾಶವಿಲ್ಲದಿದ್ದರೂ, ಅವರಿಬ್ಬರೂ ನಟಿಸಿರುವ ಚಿತ್ರದಲ್ಲಿ ನಾನೂ ಇದ್ದೇನೆ ಎನ್ನುವುದು ಖುಷಿ.
'ರಂಗಿತರಂಗ' ನಂತರ ಹಲವು ಹೊಸ ನಿರ್ದೇಶಕರ ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಇದೊಂದು ಅದ್ಭುತವಾದ ಕಥೆ. ನೀವೆಲ್ಲರೂ ನೋಡಿ ಹರಿಸಿ, ಹಾರೈಸಿ ಎಂದರು.