ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ದಿನೇಶ್ ಗಾಂಧಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.
ಸಿನಿಮಾ ನಿರ್ಮಾಪಕ ದಿನೇಶ್ ಗಾಂಧಿ ಇನ್ನಿಲ್ಲ
ಕನ್ನಡದಲ್ಲಿ ಸುದೀಪ್ ಅಭಿನಯದ ‘ವೀರ ಮದಕರಿ’ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿ, ನಟಿಸಿ, ನಿರ್ದೇಶಿಸಿದ್ದ ದಿನೇಶ್ ಗಾಂಧಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘ಛತ್ರಪತಿ’ ಎಂಬ ಸಿನಿಮಾ ನಿರ್ದೇಶಿಸಿದ್ದ ಇವರು ಬಳಿಕ ಯಾವ ಚಿತ್ರವನ್ನೂ ಮಾಡಿರಲಿಲ್ಲ.
ದಿನೇಶ್ ಗಾಂಧಿ ಅವರಿಗೆ 52 ವರ್ಷವಾಗಿತ್ತು. ಕಿಚ್ಚ ಸುದೀಪ್ ಅಭಿನಯದ ‘ವೀರ ಮದಕರಿ’ ಸಿನಿಮಾ ನಿರ್ಮಾಣ ಮಾಡಿ, ಈ ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಯಶಸ್ಸಿನ ಬಳಿಕ, ರವಿಚಂದ್ರನ್ ಅಭಿನಯದ ‘ಹೂ’, ‘ಮಲ್ಲಿಕಾರ್ಜುನ’ ಸಿನಿಮಾ ನಿರ್ಮಾಣ ಮಾಡಿದ್ದರು. ಜೊತೆಗೆ ‘ಛತ್ರಪತಿ’ ಅನ್ನೋ ಸಿನಿಮಾವನ್ನೂ ನಿರ್ದೇಶನ ಜೊತೆಗೆ ನಿರ್ಮಾಣ ಮಾಡಿದ್ದರು.
ಈ ಸಿನಿಮಾ ಸೋಲಿನ ಬಳಿಕ ದಿನೇಶ್ ಗಾಂಧಿ ಯಾವುದೇ ಸಿನಿಮಾ ಮಾಡಿರಲಿಲ್ಲ. ಆದರೆ ‘ಕನ್ವಲ್ ಲಾಲ್’ ಎಂಬ ಟೈಟಲ್ ಹೊಂದಿರುವ ಸಿನಿಮಾವನ್ನು ಸುದೀಪ್ ನಿರ್ದೇಶಿಸುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಈ ಸಿನಿಮಾ ಕೈಗೂಡಲಿಲ್ಲ. ನಂತರ ಗಣೇಶ್ ಜೊತೆ ಒಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆ ಚಿತ್ರವೂ ಸೆಟ್ಟೇರಲಿಲ್ಲ. ದಿನೇಶ್ ಗಾಂಧಿಗೆ ತಮ್ಮ ಹತ್ತು ವರ್ಷದ ಮಗನ ಮೂಲಕ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಇದಕ್ಕೆ ಪೂರಕವಾಗಿರುವ ಕಥೆಯನ್ನೂ ಕೂಡ ಅವರು ಸಿದ್ಧಪಡಿಸಿಕೊಂಡಿದ್ದರು. ಕೊರೊನಾದಿಂದಾಗಿ ಈ ಸಿನಿಮಾದ ಕೆಲಸ ಶುರುವಾಗಿರಲಿಲ್ಲ.