ಸಿನಿಮಾ ಎಂಬ ಕ್ರಿಯೇಟಿವ್ ಕ್ಷೇತ್ರದಲ್ಲಿ ಒಂದು ಸಣ್ಣ ಬಜೆಟ್ನಿಂದ ಹಿಡಿದು, ಅದ್ಧೂರಿಯಾಗಿ ಸಿನಿಮಾ ಮಾಡಬೇಕಾದ್ರೆ ಬಹು ಮುಖ್ಯವಾದ ಪಾತ್ರ ವಹಿಸೋದು ನಿರ್ಮಾಪಕರು. ಇವರನ್ನು ಡಾ. ರಾಜ್ಕುಮಾರ್ ಅನ್ನದಾತರು ಅಂತಾ ಕರೆಯುತ್ತಿದ್ದರು.
ಈ ಅನ್ನದಾತ ಇದ್ರೆ ಹೀರೋ, ಹೀರೋಯಿನ್,ಪೋಷಕ ಕಲಾವಿದರಿಂದ ಹಿಡಿದು ಸಾವಿರಾರು ಸಿನಿಮಾ ಕಾರ್ಮಿಕರಿಗೆ ಕೆಲಸ ಸಿಗುತ್ತೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಿಂದಲೂ, ಒಂದು ಸಿನಿಮಾ ಶುರುವಾಗಲು ಮುಖ್ಯ ಕಾರಣ ಹಣ ಹೂಡುವಂತ ನಿರ್ಮಾಪಕರು. 60-70 ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ಫ್ಯಾಷನಿಸ್ಟ್ ನಿರ್ಮಾಪಕರು ಇದ್ದಾರೆ. ಅತಂಹ ಅನ್ನದಾತ ನಿರ್ಮಾಪಕರ ಬಗ್ಗೆ ಒಂದು ಇಂಟ್ರಸ್ಟ್ರಿಂಗ್ ಸ್ಟೋರಿ ಇದು.
ಸ್ಯಾಂಡಲ್ವುಡ್ನಲ್ಲಿ ಲೆಕ್ಕವಿಲ್ಲದಷ್ಟು ನಿರ್ಮಾಪಕರು ಲಕ್ಷ, ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಇದರಲ್ಲಿ ಬಹುಕೋಟಿ ಬಜೆಟ್ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡ ಕೆಲವೇ ಕೆಲವು ನಿರ್ಮಾಪಕರಿದ್ದಾರೆ.
ಕಪ್ಪು-ಬಿಳುಪು ಕಾಲದಲ್ಲೇ ದೊಡ್ಡ ನಿರ್ಮಾಪಕರು ಅಂತಾ ಗುಬ್ಬಿ ವೀರಣ್ಣ ಹಾಗೂ ಅಬ್ಬಯ್ಯ ನಾಯ್ಡು ಗುರುತಿಸಿಕೊಂಡಿದ್ರು. ನಿರ್ಮಾಪಕ ಗುಬ್ಬಿ ವೀರಣ್ಣ 'ಬೇಡರ ಕಣ್ಣಪ್ಪ' ಸಿನಿಮಾ ನಿರ್ಮಾಣ ಮಾಡಲಿಲ್ಲ ಎಂದರೆ ಇಂದು ಕನ್ನಡ ಚಿತ್ರರಂಗಕ್ಕೆ ವರನಟನ ಪರಿಚಯವಾಗುತ್ತಿರಲಿಲ್ಲ.
ಗುಬ್ಬಿ ವೀರಣ್ಣ ನಂತರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡವರು ಅಬ್ಬಯ್ಯ ನಾಯ್ಡು. ಹೂವು ಮುಳ್ಳು, ರಾಜಾ ನನ್ನ ರಾಜಾ, ಚೆಲ್ಲಿದ ರಕ್ತ, ಸೀತಾರಾಮು ಅಂತಂಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅಬ್ಬಯ್ಯ ನಾಯ್ಡು ಅವರಿಗೆ ಸಲ್ಲುತ್ತದೆ.
ಇವರ ಬಳಿಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡವರು ಕ್ರೇಜಿ ಸ್ಟಾರ್ ರವಿಚಂದ್ರನ್ ತಂದೆ ಎನ್. ವಿರಾಸ್ವಾಮಿ. 1971ರಲ್ಲೇ ಡಾ. ರಾಜ್ಕುಮಾರ್ ಅವರ 'ಕುಲ ಗೌರವ' ಚಿತ್ರವನ್ನು ವೀರಾಸ್ವಾಮಿ ನಿರ್ಮಾಣ ಮಾಡಿದ್ರು. ಆ ಕಾಲದಲ್ಲಿ 2 ಲಕ್ಷ ಖರ್ಚು ಮಾಡಿ ಈ ಚಿತ್ರ ನಿರ್ಮಾಣ ಮಾಡಿದ್ರು. ಇದಾದ ಬಳಿ 3 ಲಕ್ಷದಲ್ಲಿ 'ನಾಗರಹಾವು' ಚಿತ್ರವನ್ನು ವೀರಾಸ್ವಾಮಿ ನಿರ್ಮಾಣ ಮಾಡುವ ಮೂಲಕ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡರು. ಇವಿಷ್ಟೇ ಅಲ್ಲ, ನಾ ನಿನ್ನ ಮರೆಯಲಾರೆ, ನಾರದ ವಿಜಯ, ಕಿಂದರಿ ಜೋಗಿ, ನಾನು ನನ್ನ ಹೆಂಡ್ತಿ, ಹೀಗೆ ಹೈ ಬಜೆಟ್ನಲ್ಲಿ ಎನ್. ವೀರಾಸ್ವಾಮಿ ನಿರ್ಮಾಣ ಮಾಡಿದ್ದ ಚಿತ್ರಗಳು ಯಶಸ್ಸು ಕಂಡವು.
ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ನಿರ್ಮಾಪಕಿಯಾಗಿ ಹೆಸರು ಮಾಡಿದವರು ಡಾ. ರಾಜ್ಕುಮಾರ್ ಧರ್ಮಪತ್ನಿ ಪಾರ್ವತಮ್ಮ ರಾಜ್ಕುಮಾರ್. 1975ರಲ್ಲಿ ಡಾ. ರಾಜ್ಕುಮಾರ್ ತ್ರಿ ಪಾತ್ರದಲ್ಲಿ ಅಭಿನಯಿದ 'ತ್ರಿಮೂರ್ತಿ' ಯಂತ ಸಿನಿಮಾ ನಿರ್ಮಾಣ ಮಾಡುವ ಮೂಲಕ ಪಾರ್ವತಮ್ಮನವರು ನಿರ್ಮಾಪಕಿಯಾದರು. ಆ ಕಾಲದಲ್ಲಿ ಒಂದು ಕೋಟಿ ಬಜೆಟ್ನಲ್ಲಿ ಪಾರ್ವತಮ್ಮ ತ್ರಿಮೂರ್ತಿ ಸಿನಿಮಾ ನಿರ್ಮಾಣ ಮಾಡಿದ್ದರಂತೆ. ಅಲ್ಲಿಂದ ಪೂರ್ಣಿಮಾ ಹಾಗೂ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ 50 ಲಕ್ಷದಿಂದ ಹಿಡಿದು 10 ಕೋಟಿವರೆಗೆ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಗಿರಿ ಕನ್ಯೆ, ಕವಿರತ್ನ ಕಾಳಿದಾಸ, ಚಲಿಸುವ ಮೋಡಗಳು, ಕಾಮನ ಬಿಲ್ಲು, ಓಂ, ಅಪ್ಪು, ಅರಸು ಹೀಗೆ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪಾರ್ವತಮ್ಮ ರಾಜ್ಕುಮಾರ್ ಕೋಟಿ ನಿರ್ಮಾಪಕರಲ್ಲಿ ಒಬ್ಬರು.
ಇನ್ನು ರೈತ ಕುಟುಂಬದಿಂದ ಬಂದು ಸಿನಿಮಾರಂಗದಲ್ಲಿ ನಿರ್ಮಾಪಕರಾದವರು ಕೆ.ಸಿ. ಎನ್. ಗೌಡ್ರು. ಬಂಗಾರದ ಮನುಷ್ಯ ಸಿನಿಮಾ ವಿತರಕರಾಗಿ ಚಿತ್ರರಂಗಕ್ಕೆ ಬಂದ ಕೆ.ಸಿ.ಎನ್. ಗೌಡ್ರು ಕೂಡಾ, ಬಿಗ್ ಬಜೆಟ್ ಚಿತ್ರಗಳನ್ನು ಮಾಡಿ ಸಕ್ಸಸ್ ಕಂಡಿದ್ದಾರೆ. ಅದಕ್ಕೆ ಸಾಕ್ಷಿ ಬಬ್ರುವಾಹನ, ಹುಲಿಯ ಹಾಲಿನ ಮೇವು, ಕಸ್ತೂರಿ ನಿವಾಸ, ದೂರದ ಬೆಟ್ಟ, ಶರಪಂಜರ, ಭಕ್ತ ಸಿರಿಯಾಳ. ಹೀಗೆ 20ಕ್ಕೂ ಹೆಚ್ಚು ಸಿನಿಮಾಗಳನ್ನು, ಕೋಟಿ ಬಜೆಟ್ನಲ್ಲಿ ಕೆ.ಸಿ.ಎನ್. ಗೌಡ್ರು ನಿರ್ಮಾಣ ಮಾಡುವ ಮೂಲಕ ಕೋಟಿ ನಿರ್ಮಾಪಕ ಅಂತಾ ಕರೆಸಿಕೊಂಡಿದ್ದಾರೆ. ಈಗ ಕೆಸಿಎನ್ ಗೌಡರ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಮತ್ತು ಮೋಹನ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.