ಹಿಂದಿ ಭಾಷೆಯ ಬ್ಯಾನರ್ ಹರಿದ ಹಿನ್ನೆಲೆ ಕನ್ನಡ ಹೋರಾಟಗಾರರ ಬಂಧಿಸಿದ ರಾಜ್ಯ ಸರ್ಕಾರದ ನಡೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪೊಲೀಸರ ಹಾಗೂ ಸರ್ಕಾರದ ಈ ಕ್ರಮದ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಕನ್ನಡಪರ ಹೋರಾಟಗಾರರ ಬಂಧನದ ವಿರುದ್ಧ ಕನ್ನಡ ಚಿತ್ರರಂಗ ಕೂಡ ಧ್ವನಿ ಎತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪೊಲೀಸರ ಈ ಕ್ರಮ ಖಂಡಿಸುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ್, ಕರ್ನಾಟಕದಲ್ಲಿ ಕನ್ನಡವೇ ಧರ್ಮ ಅಂದ ಮೇಲೆ ಯಾರೇ ಆದರೂ ಇಲ್ಲಿ ಬಂದ ಮೇಲೆ ಕನ್ನಡ ಧರ್ಮ ಗೌರವಿಸಿ. ಕನ್ನಡನಾಡು ತನ್ನ ನೆಲಕ್ಕೆ ಬಂದ ಎಲ್ಲಾ ಜಾತಿ, ಧರ್ಮದವರನ್ನು ನನ್ನವರು ಎಂದು ಅಪ್ಪುತ್ತದೆ ಅಂದ ಮೇಲೆ ಅನ್ಯರು ಯಾರೇ ಬಂದರೂ ಕನ್ನಡವನ್ನ ಅಪ್ಪಬೇಕು. ಅದೇ ನಿಜ ಧರ್ಮ. ಅನ್ನ ನೀರು ನೀಡುವ ನೆಲ ತಾಯಿ ಮಡಿಲಂತೆ, ಇಲ್ಲಿಇರಲು ಬಂದವರು ಇಲ್ಲಿಯವರಾಗಿ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ನಟ ನೀನಾಸಂ ಸತೀಶ್, ' ಕರ್ನಾಟಕದಲ್ಲಿ ಕನ್ನಡ ಮೊದಲು, ನಂತರ ಬೇರೆ ಭಾಷೆಗಳು. ತಾಯಿ ಹೇಗೆ ಮೊದಲೋ, ಹಾಗೆಯೇ ಮೊದಲು ಮಾತೃಭಾಷೆ ಎಂದು ಟ್ವೀಟ್ ಮಾಡಿದ್ದಾರೆ.