ಕರ್ನಾಟಕ

karnataka

ETV Bharat / sitara

ಬಾಲ ಕಲಾವಿದರಾಗಿ ಕನ್ನಡ ಬೆಳ್ಳಿತೆರೆ ಮೇಲೆ ಮಿಂಚಿದವರು ಇವರು - Child Artist Arjun

80-90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲನಟ-ನಟಿಯರಾಗಿ ಯಶಸ್ಸು ಕಂಡ ಅನೇಕ ಕಲಾವಿದರಿದ್ದಾರೆ. ಅವರಲ್ಲಿ ಕೆಲವರು ಇಂದಿಗೂ ಚಿತ್ರಗಳಲ್ಲಿ ನಟಿಸುವ ಮೂಲಕ ಯಶಸ್ಸು ಕಂಡಿದ್ದರೆ, ಮತ್ತೆ ಕೆಲವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ.

Kannada film industry Child artists
ಬೇಬಿ ಶ್ಯಾಮಿಲಿ

By

Published : Jul 21, 2020, 6:27 PM IST

ಒಂದು ಸಿನಿಮಾಗೆ ನಾಯಕ, ನಾಯಕಿ ಹಾಗೂ ಪೋಷಕ ನಟರು ಎಷ್ಟು ಮುಖ್ಯವೋ, ಅಷ್ಟೇ ಪ್ರಾಮುಖ್ಯತೆ ಬಾಲ ನಟ-ನಟಿಯರಿಗೂ ಇರುತ್ತದೆ. ಚಿತ್ರರಂಗದ ಆರಂಭದ ದಿನಗಳಲ್ಲಿ ಬಾಲನಟರು ಅಂತಾ ಯಾರೂ ಇರುತ್ತಿರಲಿಲ್ಲ. ಆ ಸಮಯದಲ್ಲಿ ಕೆಲ ನಿರ್ದೇಶಕರು ಟ್ಯಾಲೆಂಟ್ ಜೊತೆಗೆ ಕಥೆಗೆ ಸೂಕ್ತವಾದ ಮಕ್ಕಳನ್ನು ಆಯ್ಕೆ ಮಾಡಿ ಸಿನಿಮಾಗಳಲ್ಲಿ ಆ್ಯಕ್ಟ್ ಮಾಡಿಸುತ್ತಿದ್ದರು.

ಬಹಳಷ್ಟು ಸಿನಿಮಾಗಳು ಮಕ್ಕಳ ಮೇಲೆ ಆಧಾರಿತವಾಗಿವೆ. ಬಾಲ ಕಲಾವಿದರು ಚಿತ್ರಕ್ಕೊಂದು ಅಂದ ನೀಡುತ್ತಾರೆ. ಹಾಗಾದ್ರೆ ಕನ್ನಡ ಚಿತ್ರರಂಗದಲ್ಲಿ ಯಾರೆಲ್ಲಾ ಬಾಲ ಕಲಾವಿದರಾಗಿ ಮಿಂಚಿದ್ದಾರೆ ಎಂಬುದರ ಬಗ್ಗೆ ಒಂದಷ್ಟು ಮಾಹಿತಿ.

ಪುನೀತ್ ರಾಜ್​ಕುಮಾರ್

ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 14 ಸಿನಿಮಾಗಳಲ್ಲಿ ಬಾಲನಟನಾಗಿ ವಿಜೃಂಭಿಸಿದ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜ್​​​​​​ಕುಮಾರ್. 1976ರಲ್ಲೇ ತಂದೆ ಡಾ.ರಾಜ್ ಕುಮಾರ್ ಜೊತೆ ಪ್ರೇಮದ ಕಾಣಿಕೆ ಸಿನಿಮಾದಲ್ಲಿ, 2 ತಿಂಗಳು ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಅಡಿಯಟ್ಟರು ಪುನೀತ್​​​. ನಂತರ ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ ,ಬೆಟ್ಟದ ಹೂವು, ಎರಡು ನಕ್ಷತ್ರಗಳು, ಯಾರಿವನು, ವಸಂತ ಗೀತ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಏನು ಎಂಬುದನ್ನು ತೋರಿಸಿದ್ದಾರೆ.

ಬೆಟ್ಟದ ಹೂವು ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಮಾಸ್ಟರ್ ಲೋಹಿತ್, ಅಪ್ಪು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಆಗಿರೋದು ದೊಡ್ಡ ಮಟ್ಟದ ಸಾಧನೆ. ಬಾಲನಟನಾಗಿ ಬಂದ ಪುನೀತ್ ರಾಜ್ ಕುಮಾರ್, ಹೀರೋ ಆಗಿ ಸಕ್ಸಸ್ ಕಂಡಿದ್ದಾರೆ.

ಅರ್ಜುನ್ ಸರ್ಜಾ

ದಕ್ಷಿಣ ಭಾರತದ ಸ್ಟಾರ್ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೂಡಾ ಬಾಲನಟನಾಗಿ ಬೆಳ್ಳಿತೆರೆಯಲ್ಲಿ ಕರಿಯರ್ ಆರಂಭಿಸಿದರು. 1981ರಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಖ್ಯಾತ ಖಳನಟನಾಗಿದ್ದ ಶಕ್ತಿ ಪ್ರಸಾದ್ ಪುತ್ರ ಅರ್ಜುನ್ ಸರ್ಜಾರನ್ನು ಸಿಂಹದ ಮರಿ ಸೈನ್ಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಿದ್ರು. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಯಶಸ್ಸು ಗಳಿಸಿದ್ದಾರೆ.

ವಿಜಯ್ ರಾಘವೇಂದ್ರ

ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಅಂತಾ ಕರೆಸಿಕೊಳ್ಳುತ್ತಿರುವ ನಟ ವಿಜಯ ರಾಘವೇಂದ್ರ ಚಲಿಸುವ ಮೋಡಗಳು ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ, ನಟಿಸುವ ಮೂಲಕ ಬಾಲ ಕಲಾವಿದನಾಗಿ ಸಿನಿ ಪಯಣ ಆರಂಭಿಸಿದರು. ನಂತರ ಅರಳಿದ ಹೂವು, ಜಗಮೆಚ್ಚಿದ ಮಗ, ಶ್ರೀ ಕೊಲ್ಲೂರು ಮುಕಾಂಬಿಕೆ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಹೀಗೆ 8 ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದಾರೆ. ಕೊಟ್ರೇಶಿ ಕನಸು ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯರಾಘವೇಂದ್ರ, ನಿನಗಾಗಿ ಸಿನಿಮಾದಿಂದ ಹೀರೋ ಆಗಿ ಕನ್ನಡ ಚಿತ್ರರಂಗಲ್ಲಿ ಸಕ್ಸಸ್ ಪುಲ್ ನಟನಾಗಿ ಹೊರ ಹೊಮ್ಮಿದ್ದಾರೆ.

ಮಾಸ್ಟರ್ ಆನಂದ್

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಕಿಂದರಿ ಜೋಗಿ ಸಿನಿಮಾ ಮೂಲಕ ಬಾಲ ನಟನಾಗಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಮಾಸ್ಟರ್ ಆನಂದ್​ಗೆ ಹೆಸರು ತಂದು ಕೊಟ್ಟಿದ್ದು ಗೌರಿ ಗಣೇಶ ಸಿನಿಮಾದಲ್ಲಿ. ಬೆಳ್ಳಿಯಪ್ಪ ಬಂಗಾರಪ್ಪ, ಕರ್ಪೂರದ ಗೊಂಬೆ, ಮುತ್ತಿನ ಹಾರ ಸಿನಿಮಾಗಳಲ್ಲಿ ಬಾಲ ನಟನಾಗಿ ಗಮನ ಸೆಳೆದ ಮಾಸ್ಟರ್ ಆನಂದ್, ಹೀರೋ ಆಗಿ ಸಕ್ಸಸ್ ಕಾಣದೆ ಇದ್ದರೂ ನಿರ್ದೇಶಕ ಹಾಗೂ ನಿರೂಪಕನಾಗಿ ಯಶಸ್ಸು ಗಳಿಸಿದ್ದಾರೆ.

ಮಾಸ್ಟರ್ ಮಂಜುನಾಥ್

ಕರಾಟೆ ಕಿಂಗ್ ಶಂಕರನಾಗ್​​​ಗೆ ತುಂಬಾ ಆತ್ಮೀಯ ಬಾಲ ನಟನಾಗಿ ಗುರುತಿಸಿಕೊಂಡವರಲ್ಲಿ ಮಾಸ್ಟರ್ ಮಂಜುನಾಥ್ ಪ್ರಮುಖರು. ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಮೂಲಕ, ಖ್ಯಾತಿ ಹೊಂದಿರುವ ಮಂಜುನಾಥ ಬಾಲನಟನಾಗಿ ಸುಮಾರು 68 ಚಿತ್ರಗಳಲ್ಲಿ ನಟಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಂಜನಾಥ್ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್, ರವಿಚಂದ್ರನ್ ಮುಂತಾದ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ನಂತರ ಹೀರೋ ಆಗುವ ಪ್ರಯತ್ನ ಮಾಡಲಿಲ್ಲ. ಉನ್ನತ ಶಿಕ್ಷಣಕ್ಕಾಗಿ ಮಂಜುನಾಥ್ ನಟನೆಗೆ ವಿದಾಯ ಹೇಳಿದರು.

ಮಾಸ್ಟರ್ ಅರ್ಜುನ್

ವಿಷ್ಣುವರ್ಧನ್ ಹಾಗೂ ಭವ್ಯ ಜೊತೆ ನೀ ಬರೆದ ಕಾದಂಬರಿ ಚಿತ್ರದಲ್ಲಿ ಬಾಲ ನಟನಾಗಿ ಗಮನ ಸೆಳೆದಿದ್ದ ಪೋರ ಮಾಸ್ಟರ್ ಅರ್ಜುನ್. ನಂತರ ಅಬ್ಬಬ್ಬ ಎಂತಾ ಹುಡುಗ ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅರ್ಜುನ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಸಿನಿಮಾ ಅಷ್ಟೊಂದು ಹೆಸರು ತಂದು ಕೊಡದ ಕಾರಣ ಚಿತ್ರರಂಗದಿಂದ ಅರ್ಜುನ್ ದೂರ ಉಳಿದಿದ್ದಾರೆ.

ಮಾಸ್ಟರ್ ಕಿಶನ್

ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ಅಂತಾ ಗಿನ್ನಿಸ್ ದಾಖಲೆ ಸೇರಿರುವ ಬಾಲ ನಟ ಹಾಗೂ ನಿರ್ದೇಶಕ ಎಂದರೆ ಮಾಸ್ಟರ್ ಕಿಶನ್. ಗ್ರಾಮ ದೇವತೆ ಸಿನಿಮಾದಿಂದ ಬಣ್ಣದ ಪಯಣ ಶುರು ಮಾಡಿದ ಕಿಶನ್, ಚಂದು, ಲಾಲಿ ಹಾಡು, ಸ್ವಾತಿ ಮುತ್ತು ಹೀಗೆ ಹಲವು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದರು. ಮಾಸ್ಟರ್ ಕಿಶನ್ ಕೇರ್ ಆಫ್ ಫುಟ್ ಬಾತ್ ಚಿತ್ರವನ್ನು ನಿರ್ದೇಶನ ಮಾಡಿ, ನಟಿಸುವ ಮೂಲಕ ಗಿನ್ನಿಸ್​​​​​​ ದಾಖಲೆ ಬರೆದಿದ್ದಾರೆ. ಬಾಲ ನಟನಾಗಿ ಸಕ್ಸಸ್ ಕಂಡಿರುವ ಕಿಶನ್ ಹೀರೋ ಆಗಲು ಸಿದ್ಧತೆ ನಡೆಸುತ್ತಿದ್ದಾರೆ.

ಬೇಬಿ ಶ್ಯಾಮಿಲಿ

ಇನ್ನು ಕನ್ನಡ ಚಿತ್ರರಂಗದಲ್ಲಿ ಬಾಲ ನಟರಷ್ಟೇ ಅಲ್ಲದೆ, ಬಾಲ ನಟಿಯರಾಗಿ ಮಿಂಚಿರುವ ಬ್ಯೂಟಿಫುಲ್ ನಟಿಯರಿದ್ದಾರೆ. ಈ ಸಾಲಿನಲ್ಲಿ 90ರ ದಶಕದ ಸಿನಿಮಾಗಳ ಮೂಲಕ ಪ್ರೇಕ್ಷಕರ ಹೃದಯ ಕದ್ದಿದ್ದ ಬೇಬಿ ಶ್ಯಾಮಿಲಿ ಮೊದಲಿಗೆ ನಿಲ್ಲುತ್ತಾರೆ. ಮೂರು ವರ್ಷದ ಮಗುವಾಗಿದ್ದಾಗ ಮಣಿರತ್ನಂ ಅವರ ಅಂಜಲಿ ಎಂಬ ಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದರು. ವಿಷ್ಣುವರ್ಧನ್ ಅಭಿನಯದ ಮತ್ತೆ ಹಾಡಿತು ಕೋಗಿಲೆ ಚಿತ್ರದ ಮೂಲಕ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಬಾಲ ಕಲಾವಿದೆಯಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದ, ಬೇಬಿ ಶ್ಯಾಮಿಲಿ 2009ರಲ್ಲಿ ತೆಲುಗಿನ ಓಯ್ ಚಿತ್ರದ ಮೂಲಕ ನಾಯಕಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಿದರು. ಆದರೆ ಬಾಲ್ಯದಲ್ಲಿ ಕಂಡ ಯಶಸ್ಸು ಶ್ಯಾಮಿಲಿಗೆ ನಾಯಕಿಯಾಗಿ ದೊರೆಯಲಿಲ್ಲ.

ಅಮೂಲ್ಯ

ಚೆಲುವಿನ ಚಿತ್ತಾರ ಸಿನಿಮಾದಿಂದ ಹೀರೋಯಿನ್ ಆದ ನಟಿ ಅಮೂಲ್ಯ. ಮುದ್ದುಮುಖದ ಅಮೂಲ್ಯ, ಎಂಟು ವರ್ಷದ ಬಾಲಕಿಯಾಗಿದ್ದಾಗ ವಿಷ್ಣುವರ್ಧನ್ ಅವರ ಪರ್ವ ಚಿತ್ರದಲ್ಲಿ ಬಾಲ ನಟಿಯಾಗಿ ಸಿನಿಪಯಣ ಆರಂಭಿಸಿದರು, ನಂತರ ಚಂದು, ಲಾಲಿ ಹಾಡು, ನಮ್ಮ ಬಸವ ಮುಂತಾದ ಚಿತ್ರಗಳಲ್ಲಿ ಅಮೂಲ್ಯ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ಚೆಲುವಿನ ಚಿತ್ತಾರ ಸಿನಿಮಾ ನಂತರ ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಮಾಸ್ತಿಗುಡಿ ಹೀಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಮೋಡಿ ಮಾಡಿದ್ದಾರೆ.

ಒಟ್ಟಿನಲ್ಲಿ ಬಾಲಕಲಾವಿದರಾಗಿ ನಟಿಸಿದವರಲ್ಲಿ ಕೆಲವರು ಇಂದಿಗೂ ಯಶಸ್ಸು ಕಾಣುತ್ತಿದ್ದರೆ, ಮತ್ತೆ ಕೆಲವರು ತೆರೆಮರೆಗೆ ಸರಿದಿದ್ದಾರೆ.

ABOUT THE AUTHOR

...view details