ಶಿವಮೊಗ್ಗ: ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೇ ಚಿತ್ರಮಂದಿರಗಳು ಸಿಗುತ್ತಿಲ್ಲ. ಇಂತಹ ವೇಳೆ ಶೇಕಡಾ 50ರಷ್ಟು ಚಿತ್ರ ಪ್ರದರ್ಶನ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ನಟ, ನಿರ್ದೇಶಕ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು.
'ಏಕ್ ಲವ್ ಯಾ' ಸಿನಿಮಾ ಕುರಿತು ಶಿವಮೊಗ್ಗದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರೇಮ್, ಬೇರೆ ಭಾಷೆಯ ಚಿತ್ರಗಳು ಕರ್ನಾಟಕದ ಚಿತ್ರಮಂದಿರಗಳನ್ನು ಆವರಿಸಿಕೊಂಡಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಪ್ರದರ್ಶನ ಮಿತಿ ಮಾಡಿರುವುದು ಸರಿಯಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾಡದ ಮಾರ್ಗಸೂಚಿಗಳನ್ನು ಈಗ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಸರ್ಕಾರದ ಕೋವಿಡ್ ಮಾರ್ಗಸೂಚಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಏಕ್ ಲವ್ ಯಾ ಸಿನಿಮಾ ಚಿತ್ರತಂಡದ ಸುದ್ದಿಗೋಷ್ಟಿ ಬೇರೆ ಭಾಷೆಗಳ ಸಿನಿಮಾಗಳಿಂದಾಗಿ ಕರ್ನಾಟಕದ ಥಿಯೇಟರ್ಗಳಲ್ಲಿ ಕನ್ನಡ 10% ಆಗಿದೆ. ನಾವು ಚಿತ್ರ ಮಂದಿರಗಳು ಮಾಲೀಕರನ್ನು ಈ ಬಗ್ಗೆ ಪ್ರಶ್ನೆ ಮಾಡೋಕಾಗಲ್ಲ. ಏಕೆಂದರೆ ಇದು ಅವರಿಗೆ ಬ್ಯುಸಿನೆಸ್. ನಮ್ಮ ಸಿನಿಮಾ ಫೀಡ್ ಮಾಡಿಲ್ಲ ಅಂದ್ರೆ ಬೇರೆ ಸಿನಿಮಾ ಹಾಕೇ ಹಾಕ್ತಾರೆ. ಅದು ಅವರ ಹೊಟ್ಟೆಪಾಡು ಎಂದರು.
ಇದನ್ನೂ ಓದಿ:'ದುನಿಯಾ ರುಣ'ಕ್ಕೆ 'ಸಲಗ' ಚಿತ್ರದ ಸಕ್ಸಸ್ ಸಮರ್ಪಣೆ..
ಇದಲ್ಲದೇ ಸಿನಿಮಾಗಳು ರಿಲೀಸ್ ಆಗುವ ದಿನವೇ (ಡಿ.31 ಶುಕ್ರವಾರ) ಕರ್ನಾಟಕದಲ್ಲಿ ಬಂದ್ಗೆ ಕರೆ ನೀಡಲಾಗಿದೆ. ಕನ್ನಡ ನಮ್ಮ ತಾಯಿ ಇದ್ದ ಹಾಗೆ, ಅದಕ್ಕೆ ತೊಂದರೆಯಾದರೆ ಸುಮ್ಮನಿರಲು ಆಗುವುದಿಲ್ಲ. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಹೋರಾಡಲು ನಾವು ಸಿದ್ಧ. ಆದರೆ ನಮ್ಮ ಹೊಟ್ಟೆ ಮೇಲೂ ಹೊಡೆದುಕೊಳ್ಳಬಾರದು ಎಂದು ಪ್ರೇಮ್ ಹೇಳಿದರು.