ಇತ್ತೀಚೆಗೆ ‘ಸಿನಿಮಾ ಬಂಡಿ’ ಎಂಬ ತೆಲುಗು ಚಿತ್ರ ನೆಟ್ಫ್ಲಿಕ್ಸ್’ನಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಇದೀಗ ಬಹುಭಾಷಾ ಪ್ರೇಕ್ಷಕರಿಂದ ಹೆಚ್ಚಿನ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ನಟಿಸಿರುವ ವೀರಬಾಬು ಬೇರಾರು ಅಲ್ಲ, ನಮ್ಮ ಕನ್ನಡದ ನಟ ವಿಕಾಸ್ ವಸಿಷ್ಠ.
ವಿಕಾಸ್ ವಸಿಷ್ಠ ತೆಲುಗು ಚಿತ್ರರಂಗಕ್ಕೆ ಹೊಸಬರಾದರೂ, ಕನ್ನಡ ಚಲನಚಿತ್ರ ಪ್ರಿಯರಿಗೆ ಚಿರಪರಿಚಿತ ಮುಖ. ಇವರು ಕನ್ನಡದಲ್ಲಿ ಕಿರುತೆರೆ ಮಾತ್ರವಲ್ಲದೇ, ಹಿರಿತೆರೆಯಲ್ಲೂ ನಟಿಸಿದ್ದಾರೆ. 'ಕರಾಲಿ', 'ರಾಂಧವ', 'ಆರನೇ ಮೈಲಿ' ಸಿನಿಮಾಗಳಲ್ಲಿ ನಟಿಸಿರುವ ವಿಕಾಸ್ ವಸಿಷ್ಠ , 'ಪಂಚರಂಗಿ ಪೌಂ-ಪೌಂ', 'ಅಮ್ಮ', 'ಅವಳು', 'ಪ್ರೀತಿಯಿಂದ', 'ಚಕ್ರವ್ಯೂಹ' ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ 'ಮನಸಾರೆ' ಎಂಬ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ ವಿಕಾಸ್. ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ, ಸಣ್ಣ ಗ್ರಾಮದಿಂದ ಬಂದ ವಿಕಾಸ್, ತಮ್ಮ ನೆಚ್ಚಿನ ನಟನಾ ಕ್ಷೇತ್ರಕ್ಕೆ ಕಾಲಿಟ್ಟು 9 ವರ್ಷವಾಯಿತು. ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುನ್ನ ವಿಕಾಸ್ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಈಗ ‘ಸಿನಿಮಾ ಬಂಡಿ’ ವನ್ನು ತೆಲುಗು ಜನ ಮಾತ್ರವಲ್ಲದೇ, ಕರ್ನಾಟಕ, ತಮಿಳುನಾಡು, ಮುಂಬೈನಲ್ಲಿಯೂ ಮೆಚ್ಚಿ ವಿಕಾಸ್ ಅವರಿಗೆ ಸಂದೇಶಗಳನ್ನು ಕಳಿಸುತ್ತಿದ್ದಾರಂತೆ. ‘ಸಿನಿಮಾ ಬಂಡಿ’ ಸಾಕಷ್ಟು ಜನಪ್ರಿಯತೆ ಗಳಿಸಿದ ನಂತರ ಟಾಲಿವುಡ್ ನಿರ್ಮಾಪಕರು ಈಗ ವಿಕಾಸ್ ಅವರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ, ಲಾಕ್ಡೌನ್ ಇರುವ ಕಾರಣ ಯಾವುದೂ ಇನ್ನೂ ಫೈನಲ್ ಆಗಿಲ್ಲ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ ವಿಕಾಸ್.