ಆಪರೇಷನ್ ಅಲಮೇಲಮ್ಮ ಹಾಗೂ ಕವಲುದಾರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ರಿಷಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸ್ವಾತಿ ಎನ್ನುವರ ಜೊತೆ ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ರಿಷಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಈ ಖುಷಿಯನ್ನು ಆಫೀಷಿಯಲ್ ಆಗಿ ಎಲ್ಲರೆದುರು ಹಂಚಿಕೊಂಡಿದ್ದಾರೆ.
'ಕವಲುದಾರಿ'ಯಲ್ಲೇ ಸಕ್ಸಸ್ ಕಂಡ ಹುಡುಗನಿಗೆ ಸಿಕ್ಕಿತು 'ಸ್ವಾತಿ' ಮುತ್ತು.. ಎಂಗೇಜಾದರು ನಟ ರಿಷಿ - undefined
ಕವಲು ದಾರಿ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದ ನಟ ರಿಷಿ, ತಮ್ಮ ಎಂಗೇಜ್ಮೆಂಟ್ ವಿಷಯವನ್ನು ಹೇಳಿಕೊಂಡಿರಲಿಲ್ಲ. ಇದೀಗ ಚಿತ್ರವೂ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ತಮ್ಮ ನಿಶ್ಚಿತಾರ್ಥದ ವಿಷಯ ಹಂಚಿಕೊಂಡಿದ್ದಾರೆ. ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ.
ಇಂದು ಮಾಧ್ಯಮಗಳಿಗೆ ಖುಷಿ ಖುಷಿಯಾಗೇ ಸಂತಸದ ಸಂಗತಿ ಹಂಚಿಕೊಂಡಿರುವ ರಿಷಿ, 'ನೀವೆಲ್ಲರೂ ನನ್ನ ಕೆಲಸ ನೋಡಿ ಮೆಚ್ಚಿ ಪ್ರೋತ್ಸಾಹಿಸಿದ್ದೀರಿ. ನಿಮ್ಮ ಈ ಪ್ರೀತಿ ನನಗೆ ಇನ್ನಷ್ಟು ಒಳ್ಳೆ ಕೆಲಸಗಳ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಸ್ಫೂರ್ತಿ ಕೊಟ್ಟಿದೆ. ಈ ಗೆಲುವಿನ ಬೆನ್ನಲ್ಲೇ ನನ್ನ ವೈಯಕ್ತಿಕ ಜೀವನದಲ್ಲೂ ಒಂದು ಮಹತ್ತರ ಮೈಲಿಗಲ್ಲನ್ನು ಮುಟ್ಟಿದ್ದೇನೆಂದು ನಿಮ್ಮ ಬಳಿ ಹಂಚಿಕೊಳ್ಳಲು ನನಗೆ ಬಹಳ ಸಂತಸವಿದೆ. ನನ್ನ ಸಂಗಾತಿ ನನಗೆ ಸಿಕ್ಕಿದ್ದಾಳೆ. ಸ್ವಾತಿ, ಅವಳ ಹೆಸರು. ವೃತ್ತಿಯಿಂದ ಬರಹಗಾರ್ತಿ. ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾಳೆ. ನಮ್ಮಿಬ್ಬರ ಕುಟುಂಬದವರ ಆಶೀರ್ವಾದದಿಂದ, ಹೈದರಾಬಾದ್‌ನಲ್ಲಿ ಒಂದು ಚಿಕ್ಕ ಸಮಾರಂಭದಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ. ರಿಲೀಸ್ ಕೆಲಸಗಳಲ್ಲಿ ತೊಡಗಿದ್ದರಿಂದ ನಿಶ್ಚಿತಾರ್ಥದ ವಿಚಾರವನ್ನು ಇವಾಗ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ನಮ್ಮ ಮೇಲೆ ಸದಾ ಹೀಗೆ ಇರಲಿ ಎಂದು ಕೋರುತ್ತಾ, ಮದುವೆಯಲ್ಲಿ ನಿಮ್ಮನ್ನು ಭೇಟಿಯಾಗುವ ಆಶಯದೊಂದಿಗೆ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು'ಎಂದಿದ್ದಾರೆ.