ಕನ್ನಡ ಚಿತ್ರರಂಗದಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ ದೃಶ್ಯ. ಬೆಳ್ಳಿತೆರೆ ಮೇಲೆ ಜವಾಬ್ದಾರಿ ತಂದೆಯಾಗಿ, ರಾಜೇಂದ್ರ ಪೊನ್ನಪ್ಪನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ದೃಶ್ಯ -2 ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಅಭಿಮಾನಿಗಳ ಜೊತೆಗೆ ಕನ್ನಡ ಚಿತ್ರರಂಗದ ಸಾಕಷ್ಟು ತಾರೆಯರು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ, ಪಾವನ ಗೌಡ, ನಟ ಧನಂಜಯ್, ಶರಣ್, ದೇವರಾಜ್, ಪ್ರಜ್ವಲ್ ದೇವರಾಜ್, ಮೇಘನಾ ರಾಜ್, ರಮೇಶ್ ಅರವಿಂದ್ ಸೇರಿದಂತೆ ತಾರೆಯರು ರವಿಚಂದ್ರನ್ ರಾಜೇಂದ್ರ ಪೊನ್ನಪ್ಪ ಪಾತ್ರಕ್ಕೆ ಫಿದಾ ಆಗಿದ್ದಾರೆ. ಇನ್ನು ದೃಶ್ಯ ಮೊದಲ ಸಿನಿಮಾಗಿಂತ ದೃಶ್ಯ- 2 ಸಿನಿಮಾದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ರಾಜೇಂದ್ರ ಪೊನ್ನಪ್ಪ ಈಗ ಆರ್ಥಿಕವಾಗಿ ಸದೃಢನಾಗಿರುತ್ತಾನೆ. ಅಂದರೆ ಕೇಬಲ್ನಿಂದ ಡಿಜಿಟಲ್ ಯುಗಕ್ಕೆ ಅಪ್ಡೇಟ್ ಆಗಿ ಸ್ವಂತ ಥಿಯೇಟರ್ ಶುರು ಮಾಡಿದ್ದಾನೆ.
ಜೊತೆಗೆ ಹೊಸ ಸಿನಿಮಾ ನಿರ್ಮಾಣ ಮಾಡುವುದಕ್ಕೂ ರಾಜೇಂದ್ರ ಪೊನ್ನಪ್ಪ ಸಿದ್ಧತೆ ಮಾಡಿಕೊಂಡಿರುತ್ತಾನೆ. ಆದರೆ, ಏಳು ವರ್ಷ ಕಳೆದರೂ ತರುಣ್ ಕೊಲೆ ರಹಸ್ಯ ಮಾತ್ರ ರಾಜೇಂದ್ರ ಪೊನ್ನಪ್ಪನ ಕುಟುಂಬವನ್ನು ಕಾಡುತ್ತಿರುತ್ತದೆ. ರಾಜೇಂದ್ರ ಪೊನ್ನಪ್ಪ ಹಾಗೂ ಹೆಂಡತಿ, ಮಕ್ಕಳು ಭಯದಿಂದಲೆ ಜೀವನ ಸಾಗಿಸುತ್ತಿದ್ದಾರೆ. ಅಂತಿಮವಾಗಿ ಪೊಲೀಸ್ ಠಾಣೆಯಲ್ಲಿ ಹೂತು ಹಾಕಿರುವ ಶವ ಸಿಕ್ಕ ಮೇಲೂ ಪೊಲೀಸರ ಲೆಕ್ಕಾಚಾರವನ್ನು ರಾಜೇಂದ್ರ ಪೊನ್ನಪ್ಪ ಹೇಗೆ ತಲೆ ಕೆಳಗೆ ಮಾಡುತ್ತಾನೆ ಅನ್ನೋದು ದೃಶ್ಯ 2 ಸಿನಿಮಾದ ಸಸ್ಪೆನ್ಸ್ ಆಗಿದೆ.