2019ನೇ ವರ್ಷಕ್ಕೆ ಗುಡ್ ಬೈ ಹೇಳಿ 2020ರ ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಬಂದಿದೆ. ಈ ವರ್ಷದಲ್ಲಿ ಸ್ಯಾಂಡಲ್ವುಡ್ನಲ್ಲಿ ಅನೇಕ ಬದಲಾವಣೆಗಳು ಆಗಿವೆ. ಅದೇ ರೀತಿ ಸ್ಯಾಂಡಲ್ವುಡ್ ಅನೇಕ ಸ್ಟಾರ್ಗಳ ಲೈಫ್ನಲ್ಲೂ ಚೇಂಜ್ ಆಗಿದ್ದು, ಯಾವ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬುದರ ಬಗ್ಗೆ ಒಂದು ಸುತ್ತು ಕಣ್ಣಾಡಿಸೋಣ. ಈ ವರ್ಷ ಬಹುತೇಕ ನಟನಟಿಯರು, ಸ್ಟಾರ್ ಮಕ್ಕಳು ಸಪ್ತಪದಿ ತುಳಿದಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗಮನ ಸೆಳೆದಿದ್ದ ನಟಿ ನೇಹಾ ಪಾಟೀಲ್ ವರ್ಷದ ಆರಂಭದಲ್ಲೇ ಹಸೆಮಣೆ ಏರಿದ್ರು 2018ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಪ್ರಣವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ, ಫೆಬ್ರವರಿ 22, 2019 ರಲ್ಲಿ ಸಪ್ತಪದಿ ತುಳಿದರು.
ಇನ್ನು, ಈ ವರ್ಷ ಸಂಚಲನ ಮೂಡಿಸಿದ ಮದುವೆ ಅಂದ್ರೆ ಸ್ಯಾಂಡಲ್ವುಡ್ ಚಿರಯೌವನೆ, ಮೋಸ್ಟ್ ಗ್ಲಾಮರಸ್ ನಟಿ ಸುಮನ್ ರಂಗನಾಥನ್ ಅವರದ್ದು. ಜೂನ್ 7ರಂದು ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸಜನ್ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು.
ಇದಲ್ಲದೆ ಈ ವರ್ಷ ದೊಡ್ಮನೆಯಲ್ಲೂ ಓಲಗದ ಸದ್ದು ಕೇಳಿಸಿತು. ಡಾ.ರಾಜ್ ಕುಮಾರ್ ಮೊಮ್ಮಗ, ರಾಘಣ್ಣನ ಎರಡನೇ ಮಗ ಯುವ ರಾಜ್ ಕುಮಾರ್ ಮೇ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರಿನ ಹುಡುಗಿ ಬಹುಕಾಲದ ಗೆಳತಿ ಶ್ರೀದೇವಿ ಜೊತೆ ಯುವರಾಜ್ ಬೆಂಗಳೂರಿನ ಅರಮನೆಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಕೈ ಹಿಡಿದರು.
ಈ ವರ್ಷ ಸ್ಯಾಂಡಲ್ವುಡ್ ಕನಸುಗಾರ ರವಿ ಮಾಮ ಕೂಡಾ ಮಗಳಿಗೆ ಮದುವೆ ಮಾಡಿದ್ರು. ಮುದ್ದು ಮಗಳು ಗೀತಾಂಜಲಿಯನ್ನು ಬ್ಯುಸಿನೆಸ್ ಮ್ಯಾನ್ ಅಜಯ್ ಜೊತೆ ಮೇ 29 ರಂದು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಟ್ಟರು.
ಇನ್ನು, ಮಂಗಳೂರು ಮೂಲದ ನಟಿ ಯಜ್ಞಾ ಶೆಟ್ಟಿ ಕೂಡಾ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದರು. ಸಂದೀಪ್ ಶೆಟ್ಟಿ ಅವರನ್ನು ಮಂಗಳೂರಿನಲ್ಲಿ ಅಕ್ಟೋಬರ್ 29ರಂದು ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಯಜ್ಞಾ ವಿವಾಹವಾದರು.
ಆ ದಿನಗಳು ಖ್ಯಾತಿಯ ನಟಿ ಅರ್ಚನಾ ಕೂಡ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 13ಕ್ಕೆ ಅರ್ಚನಾ ವೇದಾ ಅಲಿಯಾಸ್ ಅರ್ಚನಾ ಶಾಸ್ತ್ರಿ ಹೈದರಾಬಾದ್‌ನಲ್ಲಿ ಜಗದೀಶ್ ಜೊತೆ ಸಪ್ತಪದಿ ತುಳಿದಿದ್ದಾರೆ.