ಬೆಂಗಳೂರು : ಪಟಾಕಿ ಕುರಿತಂತೆ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ ಹಾಕಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಬಾಲಿವುಡ್ ನಟಿ ಕಂಗನಾ ರಾನೌತ್ ಪ್ರತಿಕ್ರಿಯೆಯಿಂದ ಪಟಾಕಿ ಕಿಡಿ ಜೋರಾಗುತ್ತಿದೆ.
ದೀಪಾವಳಿ ಹಬ್ಬ ಮುಗಿಯುತ್ತ ಬಂದರೂ ಸೋಷಿಯಲ್ ಮೀಡಿಯಾದಲ್ಲಿ ಐಪಿಎಸ್ ಅಧಿಕಾರಿ ರೂಪಾ ಹಾಕಿದ ಪೋಸ್ಟ್ ಟ್ವಿಟರ್ನಲ್ಲಿ ಚರ್ಚೆಯಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಹೊಡೆಯುವುದನ್ನು ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಈ ಆದೇಶ ಸಮರ್ಥಿಸುವ ನಿಟ್ಟಿನಲ್ಲಿ ರೂಪಾ ತಮ್ಮ ಟ್ವಿಟರ್ ಖಾತೆಯಲ್ಲಿ ನ.14 ರಂದು 'ಪಟಾಕಿ ಸಿಡಿಸುವುದು ಹಿಂದೂ ಧರ್ಮದ ಸಂಸ್ಕೃತಿಯಲ್ಲ. ಪುರಾಣ, ಮಹಾಕಾವ್ಯಗಳಲ್ಲಿ ಪಟಾಕಿ ಪ್ರಸ್ತಾಪವಿಲ್ಲ. ಯುರೋಪಿಯನ್ನರು ಭಾರತಕ್ಕೆ ಪಟಾಕಿ ಪರಿಚಯಿಸಿದ್ದು' ಎಂದು ಪೋಸ್ಟ್ ಹಾಕಿದ್ದರು.
ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ ಕೆಲವರು ಪುರಾಣಗಳಲ್ಲಿ ಪಟಾಕಿ ಪ್ರಸ್ತಾಪವಿದೆ ಎಂದು ಕಾಮೆಂಟ್ ಮಾಡಿದ ಟ್ವೀಟಿಗರು ಚರ್ಚೆಗೆ ನಾಂದಿ ಹಾಡಿದ್ದರು. ಹಬ್ಬ ಮುಗಿದರೂ ಪರ-ವಿರೋಧದ ಚರ್ಚೆ ಕಡಿಮೆಯಾಗುತ್ತಿಲ್ಲ. ಏತ್ಮನಧ್ಯೆ 'ಅರ್ಧಬರ್ಧ ಜ್ಞಾನದಿಂದ ಜನರ ಹಾದಿ ತಪ್ಪಿಸುತ್ತಿದ್ದೀರಿ. ಸರ್ಕಾರ ಆದೇಶ ಪಾಲಿಸುತ್ತಿಲ್ಲ.. ಆದೇಶದ ಬಗ್ಗೆ ಗೌರವವಿಲ್ಲ. ನಿಮ್ಮಂತಹ ಟ್ರೋಲರ್ಗಳಿಂದ ಚರ್ಚೆ ಅನವಶ್ಯಕ ಎಂದು ಹೇಳಿ ಕೆಲವರ ಖಾತೆಗಳನ್ನು ಬ್ಲಾಕ್ ಮಾಡುತ್ತೇನೆ' ಎಂದು ರೂಪಾ ಮತ್ತೊಂದು ಪೋಸ್ಟ್ ಹಾಕಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವರು, ಪಟಾಕಿ ಬಗ್ಗೆ ಪುರಾಣಗಳಲ್ಲಿ ಪಟಾಕಿ ಪ್ರಸ್ತಾವ ಬಗ್ಗೆ ತೋರಿಸಿದರೂ ರೂಪಾ ಒಪ್ಪದೆ ಅವರ ಖಾತೆಗಳನ್ನು ನಿರ್ಬಂಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೆಲ್ಲದರ ನಡುವೆ ರೂಪಾ ಪೋಸ್ಟ್ಗೆ ನಟಿ ಕಂಗನಾ ರಾನೌತ್ ಬುಧವಾರ ಸರಣಿ ಟ್ವೀಟ್ ಮಾಡಿ ರೂಪಾ ಹೇಳಿಕೆ ಟೀಕಿಸಿದ್ದಾರೆ.. 'ಯೋಗ್ಯಲ್ಲದವರಿಗೆ ಅಧಿಕಾರ ಕೊಟ್ಟರೆ ಶಮನಗೊಳಿಸುವ ಬದಲು ಘಾಸಿಗೊಳಿಸುವ ಸಂಭವ ಹೆಚ್ಚು. ಅವರ (ರೂಪಾ) ವೈಯಕ್ತಿಕ ಜೀವನ ಬಗ್ಗೆ ನನಗೇನು ತಿಳಿದಿಲ್ಲ. ಅಸಾಮರ್ಥ್ಯದಿಂದ ಹತಾಶೆಯಿಂದ ಹೊರ ಬರುತ್ತಿರುವುದು ಖಂಡಿತ' ಎಂದು ಹೇಳಿದ್ದಾರೆ.