ತನ್ನ ಆದರ್ಶ ತತ್ವಗಳಿಂದ ಇಂದಿಗೂ ಜೀವಂತವಾಗಿರುವ ಗಾಂಧೀಜಿಯ ಹಲವು ಅಂಶಗಳನ್ನು ಆಧರಿಸಿ "ಗೋಪಾಲ ಗಾಂಧಿ" ಎಂಬ ವಿಭಿನ್ನ ಮಕ್ಕಳ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.
ಗೋಪಾಲ ಗಾಂಧಿ ಚಿತ್ರದ 'ಕನಸಿನ ಸುತ್ತ ಸುತ್ತುವ ಗೋಪಾಲ ಗಾಂಧಿ' ಆಡಿಯೋ ಬಿಡುಗಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಮ್ಮ ನಡುವೆ ಇಂದಿಗೂ ಇದ್ದಾರೆ. ರಾಷ್ಟ್ರಪಿತನ ಆದರ್ಶ ಹಾಗೂ ತತ್ವಗಳಾದ ಪರಿಸರ ಸಂರಕ್ಷಣೆ, ಶಿಕ್ಷಣ, ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಯ, ಭ್ರಷ್ಟಾಚಾರ ನಿರ್ಮೂಲನೆ ಸೇರಿದಂತೆ ಎಲ್ಲಾ ಅಂಶಗಳಿಗೆ ಒತ್ತು ಕೊಟ್ಟಿದ್ದ ರಾಪ್ಟ್ರಪಿತ ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದಾರೆ.
ಸದ್ಯ ಪೊಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ಇಂದು ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಟ ಸುಚೇಂದ್ರ ಪ್ರಸಾದ್, ಹಿರಿಯ ನಿರ್ದೇಶಕರಾದ ಓಂ ಸಾಯಿಪ್ರಕಾಶ್ ಆಗಮಿಸಿ ಚಿತ್ರದ ಆಡಿಯೋವನ್ನು ಬಿಡುಗಡೆ ಮೂಲಕ ಮಕ್ಕಳ ಚಿತ್ರಕ್ಕೆ ಶುಭ ಹಾರೈಸಿದರು. ಇನ್ನು ಈ ಚಿತ್ರಕ್ಕೆ ನಿರ್ದೇಶಕ ನಾಗೇಶ್ ಎನ್. ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಗೋಪಾಲನಾಗಿ ಬಾಲ ನಟ ಮಾಸ್ಟರ್ ಸಂಜಯ್ ರಾವ್ ನಟಿಸಿದ್ದಾರೆ. ಶಾಲಾ ಶಿಕ್ಷಕನ ಪಾತ್ರದಲ್ಲಿ ಹಿರಿಯ ಸಾಹಿತಿ ಪ್ರೊಫೆಸರ್ ದೊಡ್ಡರಂಗೇ ಗೌಡರು ನಟಿಸಿರೋದು ಈ ಚಿತ್ರದ ವಿಶೇಷ.
ಹಳ್ಳಿಗಳಲ್ಲಿ ಇಂದಿಗೂ ಎಷ್ಟೋ ಮಕ್ಕಳು ಶಾಲೆ ತೊರೆದು ಕೂಲಿನಾಲಿ ಮಾಡುತ್ತಿರುತ್ತಾರೆ. ಅಲ್ಲದೆ ಹಳ್ಳಿಗಳ ಮಕ್ಕಳಲ್ಲಿರುವ ಪ್ರತಿಭೆಯನ್ನು ಅವರ ಪೋಷಕರು ಗುರುತಿಸದೆ ಅವರ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಾರೆ. ಅಂತಹ ಮಕ್ಕಳ ಪ್ರತಿಭೆ ಗುರುತಿಸಿ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪಾತ್ರದಲ್ಲಿ ದೊಡ್ಡರಂಗೇಗೌಡರು ನಟಿಸಿದ್ದು, ಇಡೀ ಚಿತ್ರವನ್ನು ಕುಣಿಗಲ್ ಬಳಿಯ ಹಳ್ಳಿಯೋಂದರಲ್ಲಿ ಶೂಟಿಂಗ್ ಮಾಡಿದ್ದಾರೆ.
ಇನ್ನು, ಈ ಚಿತ್ರಕ್ಕೆ ವಿಶ್ವನಾಥ್ ಸಂಗೀತ ನೀಡಿದ್ದು, ದೊಡ್ಡರಂಗೇಗೌಡರು ಸಾಹಿತ್ಯ ಬರೆದಿದ್ದಾರೆ. ಶ್ರೀ ರೇವಣ್ಣಸಿದ್ದೇಶ್ವರ ಮೂವಿಸ್ ನಲ್ಲಿ ಅಶೋಕ್ ರಾವ್ ತಮ್ಮ ಮಗ ಸಂಜಯ್ ರಾವ್ಗಾಗಿ ಈ ಚಿತ್ರ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾಗೇ ಹಿರಿಯ ಸಾಹಿತಿ ದೊಡ್ಡರಂಗೇ ಗೌಡರು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗುತ್ತೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.