ಬೆಳಗಾವಿ : ಚಂದನವನದ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಸಂಬಂಧ ಇಂದು ಕೂಡ ಸಾಕಷ್ಟು ಬೆಳವಣಿಗೆ ನಡೆದಿವೆ.
ದಾಂಪತ್ಯ ಕಲಹ ಮಾಧ್ಯಮಗಳ ಮೂಲಕ ಹೊರ ಬರುತ್ತಿದ್ದಂತೆ ನಗರಕ್ಕೆ ಆಗಮಿಸಿದ ಕೆ.ಕಲ್ಯಾಣ್ ಸಹೋದರ ಹಾಗೂ ಅತ್ತಿಗೆ ಅವರು ಪ್ರೇಮಕವಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆ.ಕಲ್ಯಾಣ್, ನಮ್ಮಿಬ್ಬರ ನಡುವಿನ ಸಂವಹನ ಕೊರತೆಯೇ ದಾಂಪತ್ಯ ಕಲಹಕ್ಕೆ ಕಾರಣವಾಯಿತು. ಮನೆ ಕೆಲಸದಾಕೆಯೇ ನನ್ನ ಸುಂದರ ದಾಂಪತ್ಯದಲ್ಲಿ ಹುಳಿ ಹಿಂಡಿದಳು. ಮುಗ್ಧ ಹಾಗೂ ಸಂಸ್ಕಾರವಂತೆ ನನ್ನ ಪತ್ನಿ ಮೇಲೆ ನನಗೆ ನಂಬಿಕೆ ಇದೆ. ಪ್ರೀತಿಯೇ ಗೆಲ್ಲುತ್ತದೆ ಎಂದು ಪ್ರೇಮರಾಗ ಹಾಡಿದರು.
ಕೆ ಕಲ್ಯಾಣ್ ಪತ್ನಿ ಅಶ್ವಿನಿ ಪ್ರೇಮಕವಿಯ ದಾಂಪತ್ಯ ಕಲಹಕ್ಕೆ ಅಂತ್ಯಹಾಡಲು ಇಂದು ಉಭಯ ಕುಟುಂಬಸ್ಥರು ಅಖಾಡಕ್ಕೆ ಇಳಿದಿದ್ದು ವಿಶೇಷವಾಗಿತ್ತು. ಕೆ.ಕಲ್ಯಾಣ್ ಅವರ ಸಹೋದರ, ಅತ್ತಿಗೆ ಹಾಗೂ ಅಶ್ವಿನಿ ಅವರ ದೊಡ್ಡಪ್ಪ, ದೊಡ್ಡಮ್ಮ ಹಾಗೂ ಸಹೋದರ ಸಂಬಂಧಿ ಒಟ್ಟಿಗೆ ಕುಳಿತು ಖಾಸಗಿ ಹೋಟೆಲಿನಲ್ಲಿ ಚರ್ಚಿಸಿದರು. ಈ ವೇಳೆ ಕೆ.ಕಲ್ಯಾಣ್ ಕೂಡ ಉಪಸ್ಥಿತರಿದ್ದರು. ಬಳಿಕ ಉಭಯ ಕುಟುಂಬಸ್ಥರು ಮಾಳಮಾರುತಿ ಠಾಣೆಗೆ ತೆರಳಿ ಅಶ್ವಿನಿ ಜೊತೆಗೆ ಚರ್ಚಿಸಿದರು. ಈ ವೇಳೆ ಅಶ್ವಿನಿಯೊಂದಿಗೂ ಮಾತನಾಡಿದ್ದಾರೆ.
ಠಾಣೆಯಲ್ಲಿ ದೊಡ್ಡಮ್ಮಳನ್ನು ಅಪ್ಪಿಕೊಂಡು ಅಶ್ವಿನಿ ಕಣ್ಣೀರಾಕಿದ್ದಾರೆ. ನಿನ್ನೆಯ ಆಪ್ತಸಮಾಲೋಚನೆ ಬಳಿಕ ಮನೆಗೆ ತೆರಳಿದ್ದ ಅಶ್ವಿನಿಗೆ ಇಂದು ಮನೋವೈದ್ಯರ ಮೂಲಕ ಆನ್ಲೈನ್ ಮೂಲಕ ಆಪ್ತಸಮಾಲೋಚನೆ ನಡೆಸಲಾಯಿತು. ಬಳಿಕ ಸಂಜೆಯೂ ಮಾಳಮಾರುತಿ ಠಾಣೆಯಲ್ಲಿ ಸಮಾಲೋಚನೆ ನಡೆಸಲಾಯಿತು. ದಾಂಪತ್ಯ ಕಲಹ ಬೀದಿಗೆ ಬಂದರೂ ನಿನ್ನೆಯಿಂದ ಅಶ್ವಿನಿ ಮೌನಕ್ಕೆ ಶರಣಾಗಿದ್ದಾರೆ.
ಇಂದು ಕೂಡ ಮಾಧ್ಯಮಗಳ ಜತೆಗೆ ಮಾತನಾಡಲು ಹಿಂದೇಟು ಹಾಕಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಅಶ್ವಿನಿ ಮಾಧ್ಯಮಗಳ ಜತೆಗೆ ಮಾತನಾಡಲು ನಿರಾಕರಿಸಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.