ಒಕ್ಕಲಿಗರ ವಿದ್ಯಾಸಂಸ್ಥೆಯ ಕಾರ್ಯಕ್ರಮದಲ್ಲಿ ಕಣ್ ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅವರು ಕಳೆದ ಎರಡು ದಿನಗಳ ಹಿಂದೆ ಸುದೀರ್ಘವಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಾರ್ಯಕ್ರಮಕ್ಕೆ ಪ್ರಿಯಾ ವಾರಿಯರ್ ಅವರನ್ನು ಕರೆದುಕೊಂಡು ಬಂದ್ದ ನಿರ್ಮಾಪಕ ಕೆ. ಮಂಜು ಅವರ ಬಗ್ಗೆಯೂ ಜಗ್ಗೇಶ್ ಅಸಮಾಧಾನ ಹೊರ ಹಾಕಿದ್ದರು. ಈ ಬೆಳವಣಿಗೆಗಳ ಬಗ್ಗೆ ಕೆ.ಮಂಜು ಪ್ರತಿಕ್ರಿಯಿಸಿದ್ದು ಜಗ್ಗೇಶ್ ನಡೆಯನ್ನು ಟೀಕಿಸಿದ್ದಾರೆ.
ಬಿಜಿಎಸ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ನಟ ಜಗ್ಗೇಶ್, ನಿರ್ದೇಶಕ ಓಂ ಸಾಯಿ ಪ್ರಕಾಶ್, ಪ್ರಿಯಾ ಪ್ರಕಾಶ್ ವಾರಿಯರ್ ಇದ್ದರು. ಪ್ರಿಯಾ ವಾರಿಯರ್ ಎಂದಾಗ ವಿದ್ಯಾರ್ಥಿಗಳು ಕೇಕೆ ಹಾಕಿ ಸ್ವಾಗತಿಸಿದ್ದಾರೆ. ಅದು ಜಗ್ಗೇಶ್ಗೆ ಏನನ್ನಿಸಿದೆಯೋ ನನಗೆ ತಿಳಿದಿಲ್ಲ. ಯಾವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ? ಯಾವಾಗ ಯಾವ ಕಲಾವಿದರಿಗೆ ಜನ ಪ್ರೋತ್ಸಾಹ ಕೊಡ್ತಾರೆ ಗೊತ್ತಿಲ್ಲ. ಜನ ಅವರನ್ನ ಬೆಳೆಸಿದ್ದಾರೆ. ಅವರು ಬೆಳೆಯುತ್ತಿದ್ದಾರೆ, ಖುಷಿ ಪಡಬೇಕು ಎಂದರು.
ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪಲ್ಲ. ಯಾಕಂದ್ರೆ ಅಲ್ಲಿ ಎಲ್ಲಾ ಭಾಷೆಯ ಏಳೆಂಟು ಸಾವಿರ ವಿದ್ಯಾರ್ಥಿಗಳಿದ್ದರು. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಹ ಸಮಯದಲ್ಲಿ ಆ ನಟಿಗೆ ಪ್ರೋತ್ಸಾಹ ಕೊಟ್ಟಾಗ ನಾವು ಖುಷಿಪಡಬೇಕು. ಎಷ್ಟೋ ಸಲ ಕೋಟ್ಯಂತರ ರೂಪಾಯಿ ಇನ್ವೆಸ್ಟ್ ಮಾಡಿ ಸಿನಿಮಾ ನಿರ್ಮಿಸುವಾಗ ನಿರ್ಮಾಪಕರನ್ನು ಜನರು ಗುರುತಿಸುವುದಿಲ್ಲ. ಆದ್ದರಿಂದ ಸಾರ್ವಜನಿಕರೊಂದಿಗೆ ಯಾವ ರೀತಿ ಬೆರೆಯಬೇಕು ಎಂಬುದು ಮುಖ್ಯ. ಜಗ್ಗೇಶ್ ಅವರು ಹಿರಿಯ ಕಲಾವಿದರು ತುಂಬಾ ತಿಳಿದವರು. ಅವರು ಆ ರೀತಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು ನನಗೆ ಸರಿ ಅನ್ನಿಸಲಿಲ್ಲ ಎಂದರು.