ಹೈದರಾಬಾದ್: ನಾಳೆ(ಮೇ 20) ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬ. ಈ ಹಿನ್ನೆಲೆ ಎನ್ಟಿಆರ್ ಈ ಬಾರಿಯೂ ಕೂಡ ಹುಟ್ಟುಹಬ್ಬ ಆಚರಣೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಕೊರೊನಾ ಭೀಕರ ಪರಿಸ್ಥಿತಿಯ ಈ ಸಮಯದಲ್ಲಿ ಜನ್ಮದಿನ ಆಚರಣೆ ಮಾಡದಂತೆ ಅವರು ಕೇಳಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೂ ಒಂದು ದಿನ ಮುಂಚೆಯೇ ಜೂ. ಎನ್ಟಿಆರ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, 'ನನ್ನ ಅಭಿಮಾನಿಗಳು, ಪ್ರತಿಯೊಬ್ಬರಿಗೂ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶಗಳು, ವಿಡಿಯೋ ಮತ್ತು ಶುಭಾಶಯಗಳನ್ನು ನೋಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರ ಋಣಿಯಾಗಿರುತ್ತೇನೆ. ಸದ್ಯದಲ್ಲೇ ನನ್ನ ಕೊರೊನಾ ನೆಗೆಟಿವ್ ವರದಿ ಬರಲಿದೆ' ಎಂದಿದ್ದಾರೆ.
ಜೂನಿಯರ್ ಎನ್ಟಿಆರ್ ಮನವಿ "ನಮ್ಮ ದೇಶವು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ. ನಮ್ಮ ವೈದ್ಯಕೀಯ ಸಮುದಾಯ ಮತ್ತು ಮುಂಚೂಣಿ ಕಾರ್ಮಿಕರು ನಿಸ್ವಾರ್ಥ ಮತ್ತು ದಣಿವರಿಯದ ಹೋರಾಟ ನಡೆಸುತ್ತಿದ್ದಾರೆ. ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಇದು ಆಚರಣೆಗಳ ಸಮಯವಲ್ಲ. ಒಬ್ಬರಿಗೊಬ್ಬರು ಬೆಂಬಲ ನೀಡಿ ಮತ್ತು ಅಗತ್ಯವಿರುವವರಿಗೆ ಸಹಾಯಾಸ್ತ ನೀಡಿ. ಇದೆಲ್ಲ ಮುಗಿದ ನಂತರ ಮತ್ತು ಕೋವಿಡ್ -19 ಜೊತೆಗಿನ ಯುದ್ಧವನ್ನು ಗೆದ್ದಾಗ, ನಾವು ಎಲ್ಲವನ್ನೂ ಒಟ್ಟಿಗೆ ಆಚರಿಸೋಣ. ಮಾಸ್ಕ್ ಧರಿಸಿ, ಮನೆಯಲ್ಲಿಯೇ ಇರಿ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಜೂನಿಯರ್ ಎನ್ಟಿಆರ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸದ್ಯ ಹೋಮ್ ಐಸೋಲೇಷನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಕೊರೊನಾ ಜಾಗೃತಿ ಸಂದೇಶ ರವಾನಿಸುವ ಮೂಲಕ ಮೆಚ್ಚುಗೆ ಗಳಿಸಿದ್ದರು.