ಲಾಕ್ ಡೌನ್ ಆರಂಭಕ್ಕೂ ಮುನ್ನ ಅನೇಕ ಕನ್ನಡ ಸಿನಿಮಾಗಳು ವಿವಿಧ ಹಂತದಲ್ಲಿದ್ದವು. ಅವುಗಳಲ್ಲಿ 'ಜೊತೆಯಾಗಿರು' ಕೂಡಾ ಒಂದು. ಕಳೆದ 10 ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಸತೀಶ್ ಕುಮಾರ್ ಈ ಚಿತ್ರದ ಮೂಲಕ ಸ್ವತಂತ್ಯ್ರ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದಾರೆ.
ಪ್ರೀತಿಸುವವರ ಬಗ್ಗೆ ನೈಜ ವಿಚಾರಗಳನ್ನು ಹಾಗೂ ನೈಜ ಘಟನೆಯೊಂದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನಿಜವಾದ ಪ್ರೇಮಿಗಳು ಹಾಗೂ ಹಣದ ಆಸೆಗೆ ಪ್ರೀತಿಸಿದವನನ್ನು ತಿರಸ್ಕರಿಸಿ ಶ್ರೀಮಂತನ ಹಿಂದೆ ಹೋಗುವ ಯುವತಿ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಷ್ಟೇ ಅಲ್ಲ, ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಏನೆಲ್ಲಾ ಕಷ್ಟಪಡುತ್ತಾರೆ ಎಂಬ ಅಂಶವನ್ನು ಚಿತ್ರದಲ್ಲಿ ಸೇರಿಸಲಾಗಿದೆ.
ಚಿತ್ರದಲ್ಲಿ ವೆಂಕಟೇಶ್-ರಶ್ಮಿ ಹಾಗೂ ಸುನಿಲ್-ಪೂಜಾ ಎರಡು ಜೋಡಿಗಳಾಗಿ ಅಭಿನಯಿಸಿದ್ದಾರೆ. ಶಂಕರ್ ನಾರಾಯಣ್, ಸುಧೀರ್, ಮೈ ಆಟೋಗ್ರಾಫ್ ಬಾಲನಟ ಸಂತೋಷ್, ಮಂಜು, ಜಗದೀಶ್ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಮಹರ್ಷಿ ಹಾಗೂ ಕೆ. ಕಲ್ಯಾಣ್ ಸಾಹಿತ್ಯಕ್ಕೆ ವಿನು ಮನಸು ಸಂಗೀತ ಒದಗಿಸಿದ್ದಾರೆ. ಮಜಾ ಟಾಕೀಸ್ ಖ್ಯಾತಿಯ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ರಾಜಶೇಖರ್ ಕೂಡಾ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ.
ರಾಜ ಶಿವಶಂಕರ, ಆನಂದ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಮಾಡಿರುವ ಈ ಚಿತ್ರಕ್ಕೆ ಹಾಸನದ ಸಕಲೇಶಪುರ, ಕಳಸ, ಮಡಿಕೇರಿ, ಬೆಂಗಳೂರು, ಕನಕಪುರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ರೇಣು ಮೂವೀಸ್ ಈ ಚಿತ್ರವನ್ನು ನಿರ್ಮಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.