ಲಾಸ್ ಏಂಜಲೀಸ್:ಮಿಸ್ಚೀಫ್, ಟ್ವಿನ್ಸ್ ಮತ್ತು ಜೆರ್ರಿ ಮ್ಯಾಗೈರ್ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ಕೆಲ್ಲಿ ಪ್ರೆಸ್ಟನ್ ಸ್ತನ ಕ್ಯಾನ್ಸರ್‌ನೊಂದಿಗೆ ಎರಡು ವರ್ಷ ಕಾಲ ಹೋರಾಡಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಅವರ ಪತಿ ಜಾನ್ ಟ್ರಾವೊಲ್ಟಾ, ಕೆಲ್ಲಿ ಪ್ರೆಸ್ಟನ್ ನಿಧನದ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ನನ್ನ ಪತ್ನಿ ಕೆಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿ ಸೋತಿದ್ದಾಳೆ. ಆಕೆ ಅನೇಕರ ಪ್ರೀತಿ ಮತ್ತು ಬೆಂಬಲದೊಂದಿಗೆ ಧೈರ್ಯವಾಗಿ ಹೋರಾಟ ನಡೆಸಿದ್ದಳು" ಎಂದು ಟ್ರಾವೊಲ್ಟಾ ಹೇಳಿದ್ದಾರೆ.
ಎಂಡಿ ಆಂಡರ್ಸನ್ ಕ್ಯಾನ್ಸರ್ ಕೇಂದ್ರದಲ್ಲಿನ ವೈದ್ಯರು, ದಾದಿಯರು, ಸಹಾಯ ಮಾಡಿದ ಎಲ್ಲಾ ವೈದ್ಯಕೀಯ ಕೇಂದ್ರಗಳು, ಹಲವು ಸ್ನೇಹಿತರು, ಪ್ರೀತಿಪಾತ್ರರು ಮತ್ತು ಕುಟುಂಬದವರಿಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ. ಕೆಲ್ಲಿ ಮತ್ತು ಅವರ ಪ್ರೀತಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ನಟಿ ಕೆಲ್ಲಿ ಪ್ರೆಸ್ಟನ್ ತಮ್ಮ ಪತಿ ಜಾನ್ ಟ್ರಾವೊಲ್ಟಾ, 20 ವರ್ಷದ ಮಗಳು ಎಲಾ, ಮತ್ತು 9 ವರ್ಷದ ಮಗ ಬೆಂಜಮಿನ್ ಅವರನ್ನು ಅಗಲಿದ್ದಾರೆ.