ಒಂದು ಚಿತ್ರ ಮುಗಿಸಿದ ನಂತರವೇ ಇನ್ನೊಂದು ಚಿತ್ರ ಕೈಗೆತ್ತಿಕೊಳ್ಳುವುದು ಜೋಗಿ ಪ್ರೇಮ್ ಪಾಲಿಸಿ. ಆದರೆ, ಏಕ್ ಲವ್ ಯಾ ಮುಗಿಯುವುದಕ್ಕಿಂತ ಮುನ್ನವೇ ಅವರು ಇನ್ನೊಂದು ಚಿತ್ರಕ್ಕೆ ಕೈ ಹಾಕಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಿದ್ದಾರಂತೆ.
ಇದು ಪ್ರೇಮ್ ನಿರ್ದೇಶನದ ಒಂಬತ್ತನೇ ಚಿತ್ರ. ಸೋಮವಾರ ಒಳ್ಳೆಯ ದಿನ ಎಂಬ ಕಾರಣಕ್ಕೆ ಮನೆಯಲ್ಲೇ ಸರಳವಾಗಿ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದಾರೆ. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಪ್ರೇಮ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಯುದ್ಧದಲ್ಲಿ ಹುತಾತ್ಮನಾದರೆ ಸ್ವರ್ಗ ಕೈಬೀಸಿ ಕರೆಯುತ್ತದೆ. ಯುದ್ಧದಲ್ಲಿ ಗೆದ್ದರೆ ಸಿಂಹಾಸನ ಕರೆಯುತ್ತದೆ. ಹಾಗಾಗಿ ಯುದ್ಧ ಎನ್ನುವುದು ಯಾವತ್ತಿಗೂ ಒಳ್ಳೆಯದೇ. ಆ ಯುದ್ಧ ಈಗ ಶುರುವಾಗಿದೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
ಅಂದಹಾಗೆ, ಪ್ರೇಮ್ ಅವರ ಹೊಸ ಚಿತ್ರದ ಹೆಸರೇನು. ಯಾರೆಲ್ಲ ಇರುತ್ತಾರೆ. ಯಾವಾಗ ಪ್ರಾರಂಭವಾಗುತ್ತದೆ. ನಿರ್ಮಾಪಕರು ಯಾರು ಎಂಬ ಯಾವುದೇ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ. ಈ ಎಲ್ಲ ಮಾಹಿತಿಗಳನ್ನು ಅವರು ಇದೇ ತಿಂಗಳು ಘೋಷಿಸಲಿದ್ದಾರಂತೆ.
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ ಪ್ರೇಮ್. ರಾಣಾ, ರೀಷ್ಮಾ ನಾಣಯ್ಯ ಮತ್ತು ರಚಿತಾ ರಾಮ್ ಅಭಿನಯಿಸಿರುವ ಈ ಚಿತ್ರವು ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಿಸಿದ್ದಾರೆ.