ಅಭಿಷೇಕ್ ಅಂಬರೀಶ್ ಅಮರ್ ಚಿತ್ರಕ್ಕೆ ನಿನ್ನೆ ವಿಶ್ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ಸುಮಲತಾ ಅವರಿಗೂ ಶುಭಾಶಯ ಕೋರಿದ್ದರು. ಇನ್ನು ಇವತ್ತೂ ಕೂಡ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ರಾಜ್ಯದ ಸಂಸತ್ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸುವುದರೊಂದಿಗೆ ಸುಮಲತಾ ಅವರಿಗೆ ಎರಡನೇ ಬಾರಿ ವಿಶ್ ಮಾಡಿದ್ದಾರೆ ನಿಖಿಲ್ ಕುಮಾರಸ್ವಾಮಿ. ಜತೆಗೆ ಬಿಜೆಪಿ ಬೆಂಬಲದೊಂದಿಗೆ ಗೆಲುವು ಪಡೆದ ನೀವು ನಮ್ಮ ರೈತರಿಗೆ ಅರ್ಹ ನೆರವು, ಯೋಜನೆಗಳನ್ನು ತರುವಲ್ಲಿ ತಾವು ಯಶಸ್ವಿಯಾಗುವಿರಿ ಎಂಬುದು ಮಂಡ್ಯದ ಜನರ ನಿರೀಕ್ಷೆಯಾಗಿದೆ ಎನ್ನುವ ಮೂಲಕ ಸುಮಲತಾ ಅವರಿಗೆ ಕರ್ತವ್ಯ ನೆನಪಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ, ನೆರವು ಸಿಗದೇ ನಮ್ಮ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಶೇಷ ನೆರವಿಗಾಗಿ ಬೇಡಿಕೆ ಹೊತ್ತು ರಾಜ್ಯಸರ್ಕಾರ ಕೇಂದ್ರಕ್ಕೆ ನಿಯೋಗಗಳನ್ನು ಕರೆದೊಯ್ದು, ಬರಿಗೈಯಲ್ಲಿ ಮರಳುತ್ತಿರುವುದನ್ನು ಕೂಡ ರಾಜ್ಯದ ಜನ ನೋಡುತ್ತಲೇ ಬಂದಿದ್ದಾರೆ. ಈಗ ಕೇಂದ್ರದಲ್ಲಿ ಆಳುವ ಪಕ್ಷದ ಬೆಂಬಲದೊಂದಿಗೆ ಇಲ್ಲಿ ನೀವು ಗೆದ್ದಿರುವುದರಿಂದ, ನಮ್ಮ ರೈತರಿಗೆ ಅರ್ಹ ನೆರವು, ಯೋಜನೆಗಳನ್ನು ತರುವಲ್ಲಿ ತಾವು ಯಶಸ್ವಿಯಾಗುವಿರಿ ಎನ್ನುವುದು ಮಂಡ್ಯದ ಜನರ ಹಾಗು ರೈತರ ನಿರೀಕ್ಷೆಯಾಗಿದೆ ಎಂದಿದ್ದಾರೆ ನಿಖಿಲ್.
ಮತ್ತೊಮ್ಮೆ ಸೋಲಿನ ಹೊಣೆ ಹೊತ್ತ ನಿಖಿಲ್ :
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಗೆಲುವು ಸಾಧಿಸದೇ ಇರುವುದಕ್ಕೆ, ಪಕ್ಷದ ಅಭ್ಯರ್ಥಿಯಾಗಿ ನಾನೇ ಹೊಣೆ. ಇದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ. ಹಿನ್ನಡೆಗೆ ಕಾರಣಗಳನ್ನು ನೀಡುವ ಬದಲು ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ, ಇಲ್ಲೆ ಇರುತ್ತೇನೆ, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ 5.77 ಲಕ್ಷ ಜನರ ನಿರೀಕ್ಷೆಗಳಿಗೆ ನಾನು ಉತ್ತರದಾಯಿಯಾಗಿದ್ದೇನೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದಾರೆ.
ಇನ್ನು ಪಕ್ಷದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರ ಪರಿಶ್ರಮ, ನಮ್ಮನ್ನು ಬೆಂಬಲಿಸಿದ ಜನರ ಪ್ರೀತಿ-ಅಭಿಮಾನಗಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದಿರುವ ನಿಖಿಲ್, ನಮ್ಮ ಜೆಡಿಎಸ್ ಪಕ್ಷದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಜೊತೆಗೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾನು ತೊಡಗಿಕೊಳ್ಳುತ್ತೇನೆ. ಜೆಡಿಎಸ್ ಬಲವರ್ಧನೆಗಾಗಿ ನನ್ನ ಪ್ರಯತ್ನ ಮುಂದುವರಿಯಲಿದೆ. ನನ್ನನ್ನು ಬೆಂಬಲಿಸಿ, ಆಶೀರ್ವದಿಸಿದ ಎಲ್ಲ ನನ್ನ ಮಂಡ್ಯದ ಬಂಧುಗಳಿಗೆ, ಹಿರಿಯರಿಗೆ. ತಾಯಂದಿರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.