ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ 'ಪುಟ ನಂಬರ್ 109' ಚಿತ್ರದ ನಂತರ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಮಧ್ಯೆ 'ಪುಷ್ಪಾ ಐ ಹೇಟ್ ಟಿಯರ್ಸ್' ಎಂಬ ಅವರ ಹಿಂದಿ ಚಿತ್ರವೊಂದು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದ್ದು ಬಿಟ್ಟರೆ, ಯಾವ ಚಿತ್ರವನ್ನೂ ಜೆಕೆ ಒಪ್ಪಿಕೊಂಡಿರಲಿಲ್ಲ. ಈಗ ಸುಮಾರು 2 ವರ್ಷಗಳ ನಂತರ 'ಐರಾವನ್' ಎಂಬ ಹೊಸ ಚಿತ್ರದ ಮೂಲಕ ವಾಪಸ್ ಬರುತ್ತಿದ್ದಾರೆ.
'ಐರಾವನ್' ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ವಾಪಸ್ಸಾದ ಜೆಕೆ
ಸುಮಾರು 2 ವರ್ಷಗಳ ಬಳಿಕ ನಟ ಜಯರಾಮ್ ಕಾರ್ತಿಕ್ 'ಐರಾವನ್' ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ರಾಮ್ಸ್ ರಂಗ ನಿರ್ದೇಶಿಸುತ್ತಿದ್ದು ಅದ್ವಿತಿ ಶೆಟ್ಟಿ ಜೆಕೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿದೆ.
'ಐರಾವನ್' ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಗವಿಪುರದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಚಿತ್ರದ ಮೊದಲ ದೃಶ್ಯಕ್ಕೆ ನಿರಂತರ ಗಣೇಶ್ ಆರಂಭ ಫಲಕ ತೋರಿಸಿದರೆ, ತುಮಕೂರಿನ ಶ್ರೀ ಸಾಗರ ಮಹಾಸ್ವಾಮಿಗಳು ಕ್ಯಾಮರಾ ಚಾಲನೆ ಮಾಡಿದರು. ಚಿತ್ರವನ್ನು ನಿರಂತರ ಗಣೇಶ್ ತಮ್ಮ ನಿರಂತರ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ. ರಾಮ್ಸ್ ರಂಗ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. 'ಐರಾವನ್' ಪದದ ಅರ್ಥ ಏನು ಎಂಬ ವಿಚಾರವನ್ನು ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಂತೆ.
ರಾಮ್ಸ್ ರಂಗ ಇದಕ್ಕೂ ಮುನ್ನ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ಐರಾವನ್' ಸಿನಿಮಾ, ರಾಮ್ಸ್ ಸ್ವಂತತ್ರ್ಯವಾಗಿ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಜೆಕೆಯೊಂದಿಗೆ ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ವಿವೇಕ್, ಅವಿನಾಶ್, ಕೃಷ್ಣ ಹೆಬ್ಬಾಳೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ಸಂಯೋಜಿಸುತ್ತಿದ್ದು, ದೇವೇಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.