ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ರಾಜಮೌಳಿ ನಿರ್ದೇಶನದ 'ಬಾಹುಬಲಿ' ದೊಡ್ಡ ದಾಖಲೆ ನಿರ್ಮಿಸಿದಂತ ಸಿನಿಮಾ. ಭಾರತ ಮಾತ್ರವಲ್ಲ, ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಹೆಸರಾಯಿತು. ಈ ಮೂಲಕ ನಟ ಪ್ರಭಾಸ್ ಕೂಡಾ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಹೆಸರಾದರು.
ವಿಶೇಷವಾಗಿ ಜಪಾನ್ನಲ್ಲಿ ಈ ಸಿನಿಮಾಗೆ ವಿಶೇಷ ಸ್ವಾಗತ ಸಿಕ್ಕಿತ್ತು. ಈ ಅಭಿಮಾನಕ್ಕೆ ಧನ್ಯವಾದ ಅರ್ಪಿಸಲು ನಿರ್ದೇಶಕ ರಾಜಮೌಳಿ ಸೇರಿದಂತೆ ಪ್ರಭಾಸ್ ಹಾಗೂ ಚಿತ್ರತಂಡದ ಬಹಳಷ್ಟು ಸದಸ್ಯರು ಜಪಾನ್ಗೆ ತೆರಳಿ ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿತ್ತು. ಇದಾದ ನಂತರ ಪ್ರಭಾಸ್ಗೆ ಜಪಾನಿನಲ್ಲಿ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಯಿತು. ಹೈದರಾಬಾದ್ನಲ್ಲಿ ನೆಲೆಸಿರುವ ಕೆಲವು ಜಪಾನ್ ಯುವತಿಯರು ಇತ್ತೀಚೆಗೆ ಪ್ರಭಾಸ್ ಅವರನ್ನು ನೋಡಲು ಅವರ ಮನೆಗೆ ಹೋಗಿದ್ದಾರೆ. ಅವರ ಮನೆ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಆದರೆ ಪ್ರಭಾಸ್ ಸದ್ಯಕ್ಕೆ 'ಸಾಹೋ' ಶೂಟಿಂಗ್ಗಾಗಿ ಬಾಂಬೆಯಲ್ಲಿ ನೆಲೆಸಿದ್ದು ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.