ಕಮಲ್ ಹಾಸನ್ ಅಭಿನಯದ 'ಪುಷ್ಪಕ ವಿಮಾನ' ಚಿತ್ರ ನಿಮಗೆಲ್ಲಾ ನೆನಪಿರಬೇಕು. ಈ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್ನಲ್ಲಿ ನಡೆದಿತ್ತು. ಈ ಚಿತ್ರಕ್ಕಾಗಿಯೇ ಹೋಟೆಲ್ ಹೆಸರನ್ನು ಪುಷ್ಪಕ್ ಎಂದು ಬದಲಾಯಿಸಿಕೊಳ್ಳಲಾಗಿತ್ತು. 'ಪುಷ್ಪಕ ವಿಮಾನ' ಚಿತ್ರದ ನಂತರ, ವಿಂಡ್ಸರ್ ಮ್ಯಾನರ್ನಲ್ಲಿ ಬೇರೆ ಯಾವುದೇ ಕನ್ನಡ ಸಿನಿಮಾ ಚಿತ್ರೀಕರಣ ಮಾಡಲಾಗಿರಲಿಲ್ಲ. ಈಗ 33 ವರ್ಷಗಳ ನಂತರ ಆ ಹೋಟೆಲ್ನಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಚಿತ್ರೀಕರಣವಾಗುತ್ತಿದೆ.
33 ವರ್ಷಗಳ ನಂತರ ಆ ದೊಡ್ಡ ಹೋಟೆಲ್ನಲ್ಲಿ ಚಿತ್ರೀಕರಣವಾಗುತ್ತಿದೆ 'ಜೇಮ್ಸ್' ಸಿನಿಮಾ..!
ಸುಮಾರು 33 ವರ್ಷಗಳ ನಂತರ ಮತ್ತೊಂದು ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ವಿಂಡ್ಸರ್ ಮ್ಯಾನರ್ ಹೋಟೆಲ್ನಲ್ಲಿ ಅನುಮತಿ ನೀಡಲಾಗಿದೆ. 1987ರಲ್ಲಿ ತಯಾರಾದ ಕಮಲ್ ಹಾಸನ್ ಅಭಿನಯದ 'ಪುಷ್ಪಕವಿಮಾನ' ಸಿನಿಮಾ ವಿಂಡ್ಸರ್ ಮ್ಯಾನರ್ನಲ್ಲಿ ಚಿತ್ರೀಕರಣವಾಗಿತ್ತು. ಆ ನಂತರ ಯಾವೊಂದು ಸಿನಿಮಾ ಕೂಡಾ ಇಲ್ಲ ಚಿತ್ರೀಕರಣವಾಗಿರಲಿಲ್ಲ.
ಇದನ್ನೂ ಓದಿ:'ಬನಾರಸ್' ಮೂಲಕ ಸ್ಯಾಂಡಲ್ವುಡ್ಗೆ ಬರ್ತಿದಾರೆ ಶಾಸಕ ಜಮೀರ್ ಪುತ್ರ
'ಜೇಮ್ಸ್' ಚಿತ್ರದ ಕೆಲವು ದೃಶ್ಯಗಳಿಗೆ ಆ ಹೋಟೆಲ್ ಮಾದರಿಯ ಕಟ್ಟಡದ ಅವಶ್ಯಕತೆ ಇತ್ತು. ಲೊಕೇಶನ್ ಹುಡುಕುವಾಗ ಈ ಹೋಟೆಲ್ ಸೂಕ್ತ ಎನ್ನಿಸಿ ಹೋಟೆಲ್ನವರ ಬಳಿ ಕೇಳಲಾಗಿದೆ. ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಹೀರೋ ಎಂಬ ಕಾರಣಕ್ಕೆ ಹೋಟೆಲ್ನವರು ಕೂಡಾ ಅನುಮತಿ ಕೊಟ್ಟಿದ್ದಾರೆ. ಈಗಾಗಲೇ ವಿಂಡ್ಸರ್ ಮ್ಯಾನರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದಲ್ಲಿ ಈ ಹೋಟೆಲ್ನ್ನು ವಿಭಿನ್ನವಾಗಿ ತೋರಿಸಲಾಗಿದೆಯಂತೆ. ಲಾಕ್ಡೌನ್ ತೆರವಾದ ನಂತರ ನವೆಂಬರ್ ತಿಂಗಳಿನಿಂದ 'ಜೇಮ್ಸ್' ಚಿತ್ರೀಕರಣ ಭರದಿಂದ ಸಾಗಿದ್ದು, ಈಗಾಗಲೇ ಶೇ. 35ರಷ್ಟು ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಪುನೀತ್ಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದು ಶ್ರೀಕಾಂತ್, ಮುಖೇಶ್ ರಿಷಿ, ಅನು ಪ್ರಭಾಕರ್, ಆದಿತ್ಯ ಮೆನನ್ ಕೂಡಾ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಪತ್ತಿಕೊಂಡ ಕಿಶೋರ್ ನಿರ್ಮಿಸುತ್ತಿದ್ದಾರೆ.