ಹೊಸಪೇಟೆ(ವಿಜಯನಗರ): ಕೋವಿಡ್ 2ನೇ ಅಲೆಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸುತ್ತಿರುವ ಬಹು ಬಜೆಟ್ ಚಿತ್ರ ಜೇಮ್ಸ್ ಶೂಟಿಂಗ್ ಮುಂದೂಡಬೇಕಾಯಿತು. ಈ ಕುರಿತು ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಚಿತ್ರದ ಕುರಿತು ಹಂಚಿಕೊಂಡಿದ್ದಾರೆ. ಈಟಿವಿ ಭಾರತ್ ಪ್ರತಿನಿಧಿಗೆ ನೀಡಿದ ಎಕ್ಸ್ಕ್ಲ್ಯೂಸಿವ್ ಸಂದರ್ಶನದ ಇಲ್ಲಿದೆ ನೋಡಿ.
01) ಕೋವಿಡ್ ಸಂದರ್ಭದಲ್ಲಿ ಯಾವ ರೀತಿಯ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ?
ಈಗಾಗಲೇ ಸರ್ಕಾರ ಚಿತ್ರೀಕರಣ ಮಾಡಲು ಅನುಮತಿಯನ್ನು ನೀಡಿದೆ. ಇನ್ನು, 15 ದಿನಗಳಲ್ಲಿ ಚಿತ್ರೀಕರಣ ಸಮಯವನ್ನು ನಿಗದಿ ಮಾಡಲಾಗುವುದು. ಚಿತ್ರ ನಿರ್ಮಾಣದಲ್ಲಿ ಭಾಗವಹಿಸುವವರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು. ಇದರಿಂದ ಒಬ್ಬರಿಂದ ಮತ್ತೊಬ್ಬರಿಗೆ ತೊಂದರೆಯಾಗುವುದನ್ನು ತಪ್ಪಿಸಬಹುದು.
02) ಜೇಮ್ಸ್ ಚಿತ್ರಕ್ಕೂ ಬೇರೆ ಚಿತ್ರಕ್ಕೂ ಏನು ವ್ಯತ್ಯಾಸ?
ಪುನೀತ್ ರಾಜಕುಮಾರ್ ಮಾಡಿರುವ ಎಲ್ಲ ಚಿತ್ರಗಳು ವಿಭಿನ್ನವಾಗಿವೆ. ಒಂದೇ ತರಹದ ಕತೆಗಳು ನೋಡುವುದಕ್ಕೆ ಸಿಗುವುದಿಲ್ಲ. ಜೇಮ್ಸ್ ಚಿತ್ರ ಕ್ಲಾಸ್, ಮಾಸ್, ಕಾಮಿಡಿ, ಆ್ಯಕ್ಷನ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ.
03) ಯುವರತ್ನ ಚಿತ್ರಕ್ಕೆ ಬಿಡುಗಡೆಯಾದಾಗ ಕೋವಿಡ್ ಅಡ್ಡಿಯಾಯಿತು, ತಾವು ಯಾವ ರೀತಿ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದೀರಾ?
ಕೋವಿಡ್ 2ನೇ ಅಲೆ 2020ರಲ್ಲಿ ಅಕ್ಟೋಬರ್, ಸೆಪ್ಟೆಂಬರ್ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಬಂದಿದ್ದು ಏಪ್ರಿಲ್ನಲ್ಲಿ. 3ನೇ ಅಲೆ ಯಾವ ಸಮಯದಲ್ಲಿ ಬರುತ್ತದೆ ಎಂಬುದು ಖಚಿತತೆ ಇಲ್ಲ. ಚಿತ್ರದ ಶೂಟಿಂಗ್ ಮುಗಿಸಲು ಎರಡರಿಂದ ಮೂರು ತಿಂಗಳುಬೇಕು. ಬಳಿಕ ಎರಡು ತಿಂಗಳು ಪೋಸ್ಟ್ ಪ್ರೊಡಕ್ಷನ್ ಕೆಲಸ ಹಿಡಿಯುತ್ತದೆ. ಇನ್ನು, ಬಿಡುಗಡೆ ದಿನಾಂಕ ನಿಗದಿ ಮಾಡಿಲ್ಲ. 3ನೇ ಅಲೆ ಬರಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
04) ಒಟಿಟಿಗೆ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಇದೆಯಾ?
ಮೊದಲು ಚಿತ್ರಮಂದಿರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು. ಬಳಿಕ ಒಟಿಟಿಗೆ ಚಿತ್ರವನ್ನು ನೀಡಲಾಗುವುದು. ಆದರೆ, ಡೈರೆಕ್ಟ್ ಆಗಿ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ.