ಬೆಂಗಳೂರು :ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಹೈವೋಲ್ಟೇಜ್ ಜೇಮ್ಸ್ ಸಿನಿಮಾ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಭರ್ಜರಿ ಓಪನಿಂಗ್ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದುಕೊಂಡಂತೆ ಜೇಮ್ಸ್ ಸಿನಿಮಾ ಮೊದಲ ದಿನ ಸಾವಿರಾರು ಶೋಗಳು ಹೌಸ್ಫುಲ್ ಪ್ರದರ್ಶನಗೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಜತೆಗೆ ಕೆಜಿಎಫ್ ಸಿನಿಮಾದ ದಾಖಲೆಯನ್ನೂ ಮುರಿದಿದೆ.
ಕೆಜಿಎಫ್ ಸಿನಿಮಾ ವಿಶ್ವಾದ್ಯಂತ ತೆರೆಕಂಡು, ಫಸ್ಟ್ ಡೇ ಬರೋಬ್ಬರಿ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಜೇಮ್ಸ್ ಸಿನಿಮಾ ಮುರಿದಿದ್ದು, ಪವರ್ ಸ್ಟಾರ್ ಸಿನಿಮಾ ಕೆರಿಯರ್ನಲ್ಲಿ ಮೈಲಿಗಲ್ಲು ಸೃಷ್ಟಿಸಿದೆ.
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಜೇಮ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪುನೀತ್ ರಾಜ್ಕುಮಾರ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಜೇಮ್ಸ್ ಸಿನಿಮಾ ಫಸ್ಟ್ ಡೇ ಬರೋಬ್ಬರಿ 31 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.
ಕರ್ನಾಟಕದಲ್ಲಿ ಮಲ್ಟಿಫ್ಲೆಕ್ಸ್ ಹೊರತುಪಡಿಸಿ, 700ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ತೆರೆ ಕಂಡಿತ್ತು. ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಬರೋಬ್ಬರಿ 5 ಶೋಗಳ ಪ್ರದರ್ಶನ ಮಾಡುವ ಮೂಲಕ, ಹೌಸ್ಫುಲ್ ಆಗಿತ್ತು. ಈ ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲೇ 3000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನಗೊಂಡಿದೆ.