ಜಗ್ಗೇಶ್ ದೂರವಾಣಿಯಲ್ಲಿ ನಿರ್ದಿಷ್ಟ ನಟನ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಖತ್ ವೈರಲ್ ಆಗುತ್ತಿದೆ. ಆ ಆಡಿಯೋದಲ್ಲಿ ಜಗ್ಗೇಶ್ ಮಾತನಾಡಿದ್ದು, 'ನಮ್ಮ ಹತ್ರ ಇರೋರೆಲ್ಲ ಹಾರ್ಡ್ ವರ್ಕರ್ಸ್. ಬಟ್... ತಲೆ ಮಾಂಸ ಕಳಿಸಿ ಅಣ್ಣಾ.. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರು ಯಾರು ಇಲ್ಲ ನನ್ನ ಹತ್ರ...' ಎಂದು ಕೇಳಿಸುತ್ತದೆ.
ಆದ್ರೆ ಈ ಬಗ್ಗೆ ಪರ ಮತ್ತು ವಿರೋಧ ಎರಡೂ ಮಾತುಗಳು ಇದೀಗ ಟ್ವೀಟ್ ವಾರ್ಗೆ ಕಾರಣವಾಗಿದೆ. ಈ ರೀತಿ ಮಾತನಾಡಿರುವುದಕ್ಕೆ ಜಗ್ಗೇಶ್ ದರ್ಶನ್ ಬಳಿ ಕ್ಷಮೆ ಕೇಳಬೇಕು ಎಂದು ದರ್ಶನ್ ಅಭಿಮಾನಿಗಳು ಹೇಳ್ತಿದ್ರೆ, ಇತ್ತ ಜಗ್ಗೇಶ್ ಅಭಿಮಾನಿಗಳು, ಜಗ್ಗೇಶ್ ಈ ರೀತಿ ಮಾತನಾಡುವವರಲ್ಲ. ಅದ್ರಲ್ಲು ದೂರವಾಣಿಯಲ್ಲಿ ಜಗ್ಗೇಶ್ ಯಾರ ಬಳಿಯೂ ಸುಲಭವಾಗಿ ಮಾತನಾಡುವವರಲ್ಲ ಎನ್ನುತ್ತಿದ್ದಾರೆ.
ಈ ಎಲ್ಲಾ ಮುಸುಕಿನ ಗುದ್ದಾಟ ಶುರುವಾದ ಹಿನ್ನೆಲೆಯಲ್ಲಿ ಜಗ್ಗೇಶ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್ನಲ್ಲಿ ಬರೆದುಕೊಂಡಿರುವ ನಟ, "ಚಿತ್ರ ಪ್ರಚಾರಕ್ಕೆ fakenews spread ಮಾಡುವ ಹುನ್ನಾರ! ಒಬ್ಬ ಚಿಕ್ಕಹುಡುಗನದು ಈ ಆಟ! ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗು ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗಗೆಲ್ಲಿ ನನ್ನ ವಿನಂತಿ!'' ಎಂದು ಬರೆದಿದ್ದಾರೆ.
ಜಗ್ಗೇಶ್ ನಿರ್ಮಾಪಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಸಿನಿಮಾ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆ ನೀಡಿದ್ದಾರೆ. ಆದ್ರೆ ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಗೋದು ನೇರವಾಗಿ ಜಗ್ಗೇಶ್ ಅಥವಾ ದರ್ಶನ್ ಮಾತನಾಡಿದಾಗ. ಆ ಆಡಿಯೋ ಯಾವುದು, ಅದನ್ನು ಆ ರೀತಿ ಮಾಡಿದ್ದು ಯಾರು ಮತ್ತು ಏಕೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.