ಪ್ಯಾನ್ ಇಂಡಿಯಾ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ ಎಂಬ ಜಗ್ಗೇಶ್ ಅವರ ಮಾತುಗಳು ಕನ್ನಡ ಚಿತ್ರರಂಗದಲ್ಲೇ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಶ್, ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಅಭಿಮಾನಿಗಳು ಜಗ್ಗೇಶ್ ವಿರುದ್ಧ ತಿರುಗಿಬಿದ್ದಿದ್ದು, ಜಗ್ಗೇಶ್ ಅವರಿಗೆ ಬಾಯಿಗೆ ಬಂದಂತೆ ನಿಂದಿಸುತ್ತಿದ್ದಾರೆ. ಅದರಲ್ಲೂ ಜಗ್ಗೇಶ್ ಅವರ ಟ್ವೀಟ್‍ಗಳಿಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದು, ಅವರನ್ನು ಉಗ್ರವಾಗಿ ಟೀಕಿಸುತ್ತಿದ್ದಾರೆ.
ಜಗ್ಗೇಶ್ ಅವರಿಗೆ ಹಲವರು ಬಕೆಟ್ ಹಿಡಿಯುವವರು ಎಂದು ಮೂದಲಿಸಿದ್ದಾರೆ. ಅದಕ್ಕೆ ಕಾರಣ, ಜಗ್ಗೇಶ್ ಅವರು ಒಂದು ಟ್ವೀಟ್‍ನಲ್ಲಿ,`ಕನ್ನಡ ಚಿತ್ರರಂಗ, ಬೆಳೆಯುವ ನಟ-ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲ, ಮಕ್ಕಳು ಎಷ್ಟು ಬೆಳೆದರೂ ತಂದೆ-ತಾಯಿಯ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲ. ಶಿವಣ್ಣ, ಪುನೀತ್, ದರ್ಶನ್, ಗಣೆಶ್, ವಿಜಯ್ ಪ್ಯಾನ್ ಇಂಡಿಯಾ ನಂಬದೆ ಕನ್ನಡ, ಕನ್ನಡಿಗರ ಸೀಮೆಯಲ್ಲಿ ಕನ್ನಡ ಕಲಾವಿದ, ತಂತ್ರಜ್ಞರ ಬೆಳೆಸಿ ತಾವು ಇದ್ದಾರೆ. ಅವರ ಜತೆಗೆ ನಾನೂ ಇರುವೆ. ನಮಗೆ 100 ಪರ್ಸೆಂಡ್ ಕನ್ನಡ ಜನ ಸಾಕು' ಎಂದು ಬರೆದುಕೊಂಡಿದ್ದಾರೆ.
ಈ ಪೈಕಿ ದರ್ಶನ್ ಮತ್ತು ಪುನೀತ್ ಚಿತ್ರಗಳು ಸಹ ಪ್ಯಾನ್ ಇಂಡಿಯಾ ಬಿಡುಗಡೆಯಾಗಿರುವುದರಿಂದ ಅವರನ್ನು ಮಾತ್ರ ಬಿಟ್ಟು, ಬೇರೆಯವರ ಬಗ್ಗೆ ಜಗ್ಗೇಶ್ ಮಾತನಾಡಿದ್ದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ. ಅದೇ ಕಾರಣಕ್ಕೆ, ಜಗ್ಗೇಶ್ ಕೆಲವರಿಗೆ ಬಕೆಟ್ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್,`ಎಲ್ಲರ ತಂದೆ-ತಾಯಿ ಬಕೆಟ್ ಹಿಡಿದೇ ಅವರ ಮಕ್ಕಳನ್ನು ಬೆಳೆಸಿರುತ್ತಾರೆ. ಪಾಪ, ಯೌವ್ವನದ ಪೊರೆ ಬಂದಾಗ, ಬಿಟ್ಟಿ ಅನ್ನ ತಿನ್ನುವಾಗ ಬಕೆಟ್ ಅರಿವಾಗದು. ತನ್ನ ಸ್ವಂತ ಅನ್ನ ಗಿಟ್ಟಿಸುವಾಗ ಅವರ ಅಪ್ಪ-ಅಮ್ಮ ಹಿಡಿದ ಬಕೆಟ್ ಅವರ ಕೈ ಸೇರುವುದು. ಆಗ ಬಕೆಟ್ ಬೆಲೆ ಅರಿವಾಗುವುದು. ಬೆಳಗ್ಗೆ ಎದ್ದಾಗ, ಹಾಗಾದರೆ ಇವರು ಬಕೆಟ್ ಬಳಸದೆ ತೊಳೆಯಲು ಮಕ್ಕಳಂತೆ ಅಮ್ಮನನ್ನು ಕರೆಯಬಹುದಾ?' ಎಂದು ಜಗ್ಗೇಶ್ ತಮ್ಮ ಕಾಲೆಳೆದವರಿಗೆ ಉತ್ತರ ಕೊಟ್ಟಿದ್ದಾರೆ.
ಬಕೆಟ್ ಹಿಡಿಯೋನು ಅಂತ ಕೆಲವರು ಜಗ್ಗೇಶ್‍ಗೆ ಹೇಳಿದ್ದು ಯಾಕೆ?