ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಎರಡು ದಿನಗಳಿಂದ ಜೋರಾಗಿ ನಡೆಯುತ್ತಿದೆ. ನೆಲಮಂಗಲದಲ್ಲಿರುವ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಈ ಚಿತ್ರಕ್ಕಾಗಿ ಕಲಾ ನಿರ್ದೇಶಕ ಶಿವಕುಮಾರ್ ಹೊಸ ಸೆಟ್ ಹಾಕಿದ್ದು, ಈ ಸೆಟ್ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಭಾನುವಾರ ಸುದೀಪ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಎನ್ನಲಾಗ್ತಿದೆ.
ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಅಂದಹಾಗೆ, ಈ ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಜಾಕ್ವೆಲಿನ್ ಪಡೆದ ಸಂಭಾವನೆ ಎಷ್ಟು? ಈ ವಿಷಯವಾಗಿ ನಿರ್ಮಾಪಕ ಜಾಕ್ ಮಂಜು ಆಗಲಿ, ನಿರ್ದೇಶಕ ಅನೂಪ್ ಭಂಡಾರಿ ಆಗಲಿ ಎಲ್ಲೂ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಒಂದು ಹಾಡು ಮತ್ತು ದೃಶ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಜಾಕ್ವೆಲಿನ್ಗೆ ಮೂರು ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಮಾಹಿತಿ ನಿಜವಾಗಿದ್ದರೆ, ಬಹುಶಃ ಕನ್ನಡದಲ್ಲಿ ಹಾಡೊಂದರಲ್ಲಿ ಕಾಣಿಸಿಕೊಳ್ಳುವುದಕ್ಕೆ ನೀಡಲಾಗುತ್ತಿರುವ ಅತಿ ದೊಡ್ಡ ಸಂಭಾವನೆ ಇದಾಗಲಿದೆ.
ಇಷ್ಟೊಂದು ಭಾರಿ ಮೊತ್ತ ನೀಡಿ, ಜಾಕ್ವೆಲಿನ್ ಅವರನ್ನು ಸಿನಿಮಾಗೆ ಕರೆತರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ವಿಕ್ರಾಂತ್ ರೋಣ ಚಿತ್ರವು ಇದೀಗ ಬರೀ ಕನ್ನಡ ಚಿತ್ರವಾಗಿ ಉಳಿದಿಲ್ಲ. ಅದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಅಷ್ಟೇ ಅಲ್ಲ, ಹಲವು ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಎಲ್ಲ ಭಾಷೆಗಳಿಗೂ ಪರಿಚಯವಿರುವ ಸುದೀಪ್ ಜೊತೆಗೆ, ಇನ್ನೊಂದು ಜನಪ್ರಿಯ ಮುಖ ಚಿತ್ರದಲ್ಲಿದ್ದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ದುಬಾರಿಯಾದರೂ, ಜಾಕ್ವೆಲಿನ್ ಹೇಳಿದ ಮೊತ್ತವನ್ನು ಕೊಟ್ಟು ಕರೆತರಲಾಗಿದೆ ಎಂಬ ಸುದ್ದಿ ಇದೆ.
ಈಗಾಗಲೇ, ವಿಕ್ರಾಂತ್ ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿದ್ದು, ಈ ಹಾಡೊಂದನ್ನು ಸೇರಿಸಿದರೆ, ಚಿತ್ರ ಮುಕ್ತಾಯವಾಗುತ್ತಿದೆ. ಮುಂಚೆ ಆಗಸ್ಟ್ 19 ಕ್ಕೆ ಚಿತ್ರ ಬಿಡುಗಡೆ ಎಂದು ಹೇಳಲಾಗಿತ್ತು. ಆದರೀಗ ಚಿತ್ರದ ಬಿಡುಗಡೆ ದಿನಾಂಕ ಪೋಸ್ಟ್ಪೋನ್ ಆಗಿದ್ದು, ಮುಂದಿನ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.