ಮುಂಬೈ(ಮಹಾರಾಷ್ಟ್ರ):ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೊತೆಯಲ್ಲಿರುವ ತನ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಸಮಾಧಾನ ಹೊರಹಾಕಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ನಟಿ, 'ಈ ದೇಶ ಮತ್ತು ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವ ನೀಡಿದ್ದಾರೆ. ಇದರಲ್ಲಿ ಮಾಧ್ಯಮಗಳ ಸ್ನೇಹಿತರೂ ಇದ್ದಾರೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾನೀಗ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂಬುದು ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಗೊತ್ತಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಇದರ ಜೊತೆಗೆ 'ನನ್ನ ಖಾಸಗಿತನ ಮತ್ತು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಫೋಟೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ ಎಂದು ಅದೇ ನಂಬಿಕೆಯಲ್ಲೇ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಮಾಡುವುದಿಲ್ಲ. ನನಗೂ ಈ ರೀತಿ ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನ್ಯಾಯ ಮತ್ತು ಒಳ್ಳೆಯತನ ಯಾವಾಗಲೂ ಮೇಲುಗೈ ಸಾಧಿಸುತ್ತವೆ ಎಂದು ಆಶಿಸುತ್ತೇವೆ. ಧನ್ಯವಾದ' ಎಂದು ಜಾಕ್ವೆಲಿನ್ ಇನ್ಸ್ಟಾಗ್ರಾಮ್ನಲ್ಲಿ ಉಲ್ಲೇಖಿಸಿದ್ದಾರೆ.