ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೌಂಡ್ ಮಾಡುತ್ತಿರುವ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿರುವ ಜಾಕ್ವೆಲಿನ್ ಫರ್ನಾಂಡಿಸ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಗ್ಲಾಮರಸ್ ಲುಕ್ ನಲ್ಲಿ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ.
ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ಜಾಕ್ವೆಲಿನ್ ಫರ್ನಾಂಡಿಸ್ಗೆ 'ವಿಕ್ರಾಂತ್ ರೋಣ' ಚಿತ್ರ ತಂಡದಿಂದ ಸ್ಪೆಷಲ್ ಗಿಫ್ಟ್ವೊಂದು ಸಿಕ್ಕಿದೆ. ಗಡಂಗ್ ರಕ್ಕಮ್ಮನಾಗಿ ಕಾಣಿಸಿಕೊಂಡಿರುವ ಜಾಕ್ವೆಲಿನ್ ಅವರ ಮತ್ತೊಂದು ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಫೋಸ್ಟರ್ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.
ನಟ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಲಿದ್ದು, ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಬರೋಬ್ಬರಿ 14 ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ಆಗಲಿದ್ದು, ಸದ್ಯ ಗಡಂಗ್ ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿರುವ ಎರಡನೇ ಪೋಸ್ಟರ್ ಗಮನ ಸೆಳೆಯುತ್ತಿದೆ.