ಮುಂಬೈ:ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳು ತಮ್ಮ ಮಾನಹಾನಿ ಮಾಡಿವೆ ಎಂದು ನಟಿ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತ ಅರ್ಜಿ ವಿಚಾರಣೆಯನ್ನು ಕೋರ್ಟ್ ಇವತ್ತು ಕೈಗೆತ್ತಿಕೊಂಡಿತು.
ನ್ಯಾಯಮೂರ್ತಿ ಗೌತಮ್ ಪಟೇಲ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಮಾನಹಾನಿ ಎನಿಸುವ ಕೆಲವೊಂದು ವಿಡಿಯೋ ತುಣುಕುಗಳನ್ನು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಂದ ಡಿಲೀಟ್ ಮಾಡುವಂತೆ ಸೂಚನೆ ನೀಡಿತು.
ಮಾನನಷ್ಟ ಆಗಲು ಹೇಗೆ ಸಾಧ್ಯ? ಪ್ರಶ್ನೆ ಮಾಡಿದ ಹೈಕೋರ್ಟ್
ಪೊಲೀಸ್ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿದ್ದರೆ ಅದು ಮಾನಹಾನಿ ಆಗುವುದಿಲ್ಲ. ಜೊತೆಗೆ ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂಬುದಾಗಿ ವರದಿ ಪ್ರಕಟಗೊಂಡಿದ್ರೆ ಅದು ಮಾನಹಾನಿ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ನ್ಯಾಯಮೂರ್ತಿಗಳು ಶಿಲ್ಪಾ ಪರ ವಕೀಲರಿಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಶಿಲ್ಪಾ ಶೆಟ್ಟಿ
ಪತ್ರಿಕಾ ಸ್ವಾತಂತ್ರ್ಯ ಹಾಗೂ ಖಾಸಗಿತನದ ನಡುವೆ ಸಮತೋಲನ ಇರಬೇಕು. ಎಲ್ಲ ಹೇಳಿಕೆ ಮಾನಹಾನಿ ಎಂದು ಹೇಳಲು ಸಾಧ್ಯವಿಲ್ಲ. ಅವುಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಆದರೆ ಮಾನಹಾನಿ ಎಂದೆನಿಸುವ ವಿಡಿಯೋ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟಿವಿ ಚಾನೆಲ್ಗಳಲ್ಲಿ ಪ್ರಕಟಗೊಳ್ಳದಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದೆ.