ಪವನ್ ಒಡೆಯರ್ ನಿರ್ದೇಶಿಸುತ್ತಿರುವ 'ರೇಮೊ' ಸಿನಿಮಾ ಬಹುತೇಕ ಪೂರ್ಣಗೊಂಡಿದೆ ಮುಂದಿನ ವರ್ಷ ಜನವರಿಯಲ್ಲಿ ಉಳಿದ ಭಾಗದ ಚಿತ್ರೀಕರಣ ಮುಗಿಸಿ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪವನ್ ಒಡೆಯರ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಇಶಾನ್ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಇಶಾನ್ಗೆ 'ರೇಮೊ' ಎರಡನೇ ಚಿತ್ರ. ಇದಕ್ಕೂ ಮುನ್ನ ಅವರು ಪುರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದರು. ಇಶಾನ್ ನೋಡಲು ಬಾಲಿವುಡ್ ಹೀರೋನಂತೆ ಕಾಣುತ್ತಾರೆ. ಆದರೆ ಅವರು ಬೆಂಗಳೂರು ಹುಡುಗ. ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ವಜ್ರಕಾಯ, ದಿ ವಿಲನ್ ಸಿನಿಮಾಗಳ ನಿರ್ಮಾಪಕ ಸಿ.ಆರ್. ಮನೋಹರ್ ಅವರ ಸೋದರ ಸಂಬಂಧಿ ಇಶಾನ್. ವೈಜಾಗ್ನಲ್ಲಿ ಒಂದು ವರ್ಷದ ಕಾಲ ಆ್ಯಕ್ಟಿಂಗ್ ತರಬೇತಿ ಪಡೆದಿರುವ ಇಶಾನ್, ತರಬೇತಿ ಮುಗಿಯುತ್ತಿದ್ದಂತೆ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾದರು. ಅದಕ್ಕೂ ಮುನ್ನ ಅವರು ಉಪೇಂದ್ರ ಅಭಿನಯದ 'ಶಿವಂ' ಚಿತ್ರದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ನಟಿಸಿದ್ದರು. 'ರೋಗ್' ಸಿನಿಮಾ ಕನ್ನಡದೊಂದಿಗೆ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗಿತ್ತು. ತೆಲುಗು ಪ್ರೇಕ್ಷಕರಿಗೂ ಇಶಾನ್ ಪರಿಚಯವಿರುವುದರಿಂದ 'ರೇಮೊ' ಸಿನಿಮಾ ಕೂಡಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.