'ಕೆಜಿಎಫ್' ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್. ಟ್ಯಾಲೆಂಟ್ ಜೊತೆಗೆ ಅದೃಷ್ಟ ಒಂದು ಇದ್ರೆ, ಚಿತ್ರರಂಗದ ಸುಲ್ತಾನ ಆಗಬಹುದು ಅನ್ನೋದಿಕ್ಕೆ ಯಶ್ ತಾಜಾ ಉದಾಹರಣೆ. ಯಶ್ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದು, ರಾಕಿ ಬಾಯ್ ಸಕ್ಸಸ್ ಹಿಂದಿರುವ ಸಿನಿಮಾಗಳ ಇಂಟ್ರಸ್ಟ್ರಿಂಗ್ ಕಹಾನಿ ಇಲ್ಲಿದೆ ನೋಡಿ.
'ಜಂಬದ ಹುಡುಗಿ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯಶ್ ಇಂದು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಡಾ. ರಾಜ್ಕುಮಾರ್ ಸಿನಿಮಾಗಳನ್ನ ನೋಡಿ, ನಾನು ಸಿನಿಮಾ ಹೀರೋ ಆಗಬೇಕು ಎಂದು ಚಿಕ್ಕವಸ್ಸಿನಿಂದಲೂ ಕನಸು ಕಂಡಿದ್ದ ಯಶ್ ಈವರೆಗೆ ಯಶ್ 17 ಸಿನಿಮಾಗಳನ್ನ ಮಾಡಿದ್ದಾರೆ.
2008ರಲ್ಲಿ ತೆರೆ ಕಂಡ'ಮೊಗ್ಗಿನ ಮನಸು'ಸಿನಿಮಾ ಮೂಲಕ ಯಶ್ ಪೂರ್ಣ ಪ್ರಮಾಣದ ಹೀರೋ ಆಗಿ ಹೊರಹೊಮ್ಮಿದರು. ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಚಿತ್ರವನ್ನ, ನಿರ್ಮಾಪಕ ಈ ಕೃಷ್ಣಪ್ಪ ₹3 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡ್ತಾರೆ. ಈ ಚಿತ್ರದಲ್ಲಿ ಯಶ್ ಲವರ್ ಬಾಯ್ ಪಾತ್ರದಲ್ಲಿ ಸಿನಿಮಾ ಪ್ರೇಕ್ಷಕರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗ್ತಾರೆ. ಈ ಚಿತ್ರ ನೂರು ದಿನ ಪ್ರದರ್ಶನ ಕಾಣುವ ಮೂಲಕ ₹5 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ. ಅಲ್ಲಿಂದ ಯಶ್ ಸ್ಯಾಂಡಲ್ವುಡ್ನಲ್ಲಿ ಭರವಸೆ ನಾಯಕ ಆಗ್ತಾರೆ.
ಈ ಸಿನಿಮಾ ಸಕ್ಸಸ್ ನಂತರ, 'ಕಳ್ಳರ ಸಂತೆ', 'ಗೋಕುಲ' ಎನ್ನುವ ಸಿನಿಮಾ ಮಾಡ್ತಾರೆ. ಆದರೆ ಈ ಸಿನಿಮಾಗಳು ಯಶ್ಗೆ ಅಷ್ಟೊಂದು ನೇಮ್ ಫೇಮ್ ತಂದುಕೊಡಲ್ಲ.
2010ರಲ್ಲಿ ತೆರೆಕಂಡ 'ಮೊದಲಾಸಲ' ಚಿತ್ರ ಯಶ್ಗೆ ಕೈ ಹಿಡಿಯುತ್ತೆ. ಯಶ್ಗೆ ಭಾಮಾ ಜೋಡಿಯಾಗಿರುತ್ತಾರೆ. ಅಪ್ಪ ಮಗಳ ಬಾಂಧವ್ಯದ ಕಥೆ ಆಧರಿಸಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಪುರೋಷತ್ತಮ್ರ ಈ ಚಿತ್ರವನ್ನ ಯೋಗೀಶ್ ನಾರಾಯಣ್ ₹2 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ರು. ಆ ದಿನಗಳಲ್ಲಿ ಮೊದಲಾಸಲ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಯಶ್ಗೆ ಸ್ಟಾರ್ ಡಮ್ ತಂದು ಕೊಡುತ್ತೆ.
ನಂತರ ಯಶ್ಗೆ ಮತ್ತೊಂದು ಬ್ರೇಕ್ ಕೊಟ್ಟ ಸಿನಿಮಾ 'ರಾಜಧಾನಿ'. ಬೆಂಗಳೂರಿನ ರೌಡಿಸಂ ಬಗ್ಗೆ ಕಥೆ ಆಧರಿಸಿರೋ ಈ ಚಿತ್ರ ಸೌಮ್ಯ ಸತ್ಯನ್ ನಿರ್ದೇಶನ ಜೊತೆಗೆ, ₹6 ಕೋಟಿ ಬಜೆಟ್ ನಲ್ಲಿ ಮೂಡಿಬಂದಿದ್ದು, ಯಶ್ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡುತ್ತೆ.
ರಾಜಧಾನಿ ಚಿತ್ರದ ಬಳಿಕ ಯಶ್ಗೆ ಮತ್ತೊಂದು ಹಿಟ್ ಕೊಟ್ಟ ಚಿತ್ರ 'ಕಿರಾತಕ'. ಮಂಡ್ಯ ಭಾಷೆಯ ಸೊಗಡಿನಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್ ಮಂಡ್ಯ ಹಳ್ಳಿ ಹೈದನ ಪಾತ್ರದಲ್ಲಿ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ಪ್ರೇಕ್ಷಕರಿಗೆ ಇಷ್ಟ ಆಗ್ತಾರೆ. ₹3 ಕೋಟಿ ರೂ. ಬಜೆಟ್ನ ಈ ಸಿನಿಮಾವನ್ನ ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದು, ಶರವಣಮೂರ್ತಿ ನಿರ್ಮಾಣ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ 6 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಈ ಅಣ್ತಮ್ಮನ ಸ್ಟಾರ್ ವ್ಯಾಲ್ಯೂ ಹೆಚ್ಚಾಯಿತು.
ಇದನ್ನೂ ಓದಿ: Yash Birthday: ರಾಕಿಂಗ್ ಸ್ಟಾರ್ ಬರ್ತ್ಡೆ ಸ್ಪೆಷಲ್..ಕೆಜಿಎಫ್-2 ಹೊಸ ಪೋಸ್ಟರ್ ಬಿಡುಗಡೆ
ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಮಾಡ್ತಾ ಬರ್ತಾ ಇದ್ದ ಯಶ್ ಸಿನಿಮಾ ಕೆರಿಯರ್ನಲ್ಲಿ ಮತ್ತಷ್ಟು ಸ್ಟಾರ್ ಡಮ್ ತಂದುಕೊಟ್ಟ ಚಿತ್ರ'ಗೂಗ್ಲಿ'. ಪವನ್ ಒಡೆಯರ್ ನಿರ್ದೇಶನದ, ಈ ಚಿತ್ರಕ್ಕೆ ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ ಬರೋಬ್ಬರಿ ₹5 ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಿಸಿದ್ದರು. ಯಶ್ ತನ್ನ ಹೊಸ ಲುಕ್ ಜೊತೆಗೆ ಯೂತ್ ಐಕಾನ್ ಆಗಿ ಕಾಣಿಸಿಕೊಂಡ ಗೂಗ್ಲಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ ₹8 ಕೋಟಿ ಕಲೆಕ್ಷನ್ ಮಾಡಿತ್ತು.
ಈ ಯಶಸ್ಸಿನ ನಂತರ, ಯಶ್ ಮೀಸೆ ತಿರುವಿ ಅಬ್ಬರಿಸಿದ ಸಿನಿಮಾ'ರಾಜಾಹುಲಿ'. 2013ರಲ್ಲಿ ತೆರಕಂಡ ರಾಜಾಹುಲಿ ಸಿನಿಮಾ ಸೆಂಚುರಿ ಬಾರಿಸೋ ಜೊತೆಗೆ, ಗಲ್ಲಾ ಪೆಟ್ಟಿಗೆಯಲ್ಲೂ ಕೋಟಿ ಕೋಟಿ ಬಾಚಿತ್ತು. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರವನ್ನ ನಿರ್ಮಾಪಕ ಕೆ ಮಂಜು ₹6 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ರು. ಆ ದಿನದಲ್ಲಿ ರಾಜಾಹುಲಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ₹9 ಕೋಟಿ ರೂಪಾಯಿ. ಈ ಸಿನಿಮಾದಲ್ಲಿ ಯಶ್ಗೆ ಮೇಘನಾ ರಾಜ್ ಜೋಡಿಯಾಗಿ ಮಿಂಚಿದ್ರು.
ಹೀಗೆ ವಿಭಿನ್ನ ಪಾತ್ರಗಳನ್ನ ಮಾಡ್ತಾ, ಕಥೆ ಬಗ್ಗೆ ಹೆಚ್ಚು ಒತ್ತು ಕೊಡ್ತಾ ಇದ್ದ ಯಶ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡ ಚಿತ್ರ 'ಗಜಕೇಸರಿ'. ಕ್ಯಾಮರಾಮ್ಯಾನ್ ಆಗಿದ್ದ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನ ಜಯಣ್ಣ ಭೋಗೇಂದ್ರ ₹9 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ರುದ್ದು, ಬಾಕ್ಸ್ ಆಫೀಸ್ನಲ್ಲಿ ₹11 ಕೋಟಿ ರೂ ಕಲೆಕ್ಷನ್ ಮಾಡಿತ್ತು.
ಒಂದರ ಮೇಲೆ ಹಿಟ್ ಸಿನಿಮಾಗಳನ್ನ ಮಾಡ್ತಾ ಇದ್ದ ಯಶ್, ಸಿನಿಮಾ ಕೆರಿಯರ್ ನಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಆದ ಚಿತ್ರ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'. ₹12 ಕೋಟಿ ವೆಚ್ಚದಲ್ಲಿ ಮೂಡಿಬಂದ ಈ ಚಿತ್ರವನ್ನ ಜಯಣ್ಣ ನಿರ್ಮಿಸಿದರೆ, ಸಂತೋಷ್ ಆನಂದ್ ರಾಮ್ ಇದರ ನಿರ್ದೇಶಕರಾಗಿದ್ದರು. ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ ₹25 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಯಶ್ ಕರಿಯರ್ನಲ್ಲಿ ಬ್ಲಾಕ್ ಬ್ಲಸ್ಟರ್ ಚಿತ್ರ ಅನಿಸಿಕೊಂಡಿತ್ತು.
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ 4 ಸಿನಿಮಾದಲ್ಲಿ ಯಶ್-ರಾಧಿಕಾ ರೊಮ್ಯಾನ್ಸ್
ರಿಯಲ್ ಆಗಿ ಪ್ರೀತಿಸುತ್ತಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಮೊಗ್ಗಿನ ಮನಸು, ಡ್ರಾಮಾ ಬಳಿಕ ಜೊತೆಯಾಗಿ ನಟಿಸಿದ ಮೂರನೇ ಸಿನಿಮಾ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಆಗಿತ್ತು. ಬಳಿಕ ಈ ಜೋಡಿ ಮತ್ತೆ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ಇವರಿಬ್ಬರು ಒಟ್ಟು ನಾಲ್ಕು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.
ಯಶ್ ಸಿನಿಮಾ ಜರ್ನಿಯಲ್ಲಿ ಅತೀ ಹೆಚ್ಚು ಬಜೆಟ್ ಸಿನಿಮಾ ಟ್ರೆಂಡ್ ಶುರುವಾಗಿದ್ದು 'ಮಾಸ್ಟರ್ ಪೀಸ್' ಚಿತ್ರದಿಂದ. ಈ ಚಿತ್ರ ಅಂದುಕೊಂಡಂತೆ ಸಕ್ಸಸ್ ಆಗದೆ ಇದ್ರೂ, ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು. ಮಂಜು ಮಂಡ್ಯ ನಿರ್ದೇಶನದ ಈ ಚಿತ್ರವನ್ನ, ನಿರ್ಮಾಪಕ ವಿಜಯ್ ಕಿರಂಗದೂರ್ ಬರೋಬ್ಬರಿ ₹15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ರು. ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಗಳಿಸಿದ್ದು ₹20 ಕೋಟಿ ರೂಪಾಯಿ.
ಈ ಸಿನಿಮಾ ಬಳಿಕ ಯಶ್ ಎರಡು ವರ್ಷ ಸಿನಿಮಾನೇ ಮಾಡಲಿಲ್ಲ.ಇದಕ್ಕೆ ಕಾರಣ ಫ್ಯಾನ್ ಇಂಡಿಯಾ'ಕೆಜಿಎಫ್: ಚಾಪ್ಟರ್ 1'ಸಿನಿಮಾಕ್ಕಾಗಿ. ದೇಶ, ವಿದೇಶದಾದ್ಯಂತ ಹೆಚ್ಚು ಸದ್ದು ಮಾಡಿದ ಹಾಗೂ ಕನ್ನಡ ಚಿತ್ರರಂಗದಲ್ಲೇ ಅತಿ ದೊಡ್ಡ ಮೊತ್ತದ ಸಿನಿಮಾ ಇದಾಗಿತ್ತು. ಈ ಸಿನಿಮಾದಲ್ಲಿ ರಾಕಿ ಬಾಯ್ ಆಗಿ ಮಿಂಚಿದ್ದ ಯಶ್ ಸಿನಿಮಾ ಜೀವನವೇ ಇದರಿಂದ ಬದಲಾಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ನಿರ್ಮಾಪಕ ವಿಜಯ್ ಕಿರಂಗದೂರ್ ಬರೋಬ್ಬರಿ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ರು. ಪಂಚಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಸುಮಾರು 250 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯಿತ್ತು.
'ಕೆಜಿಎಫ್: ಚಾಪ್ಟರ್ 2' ಹೊಸ ಪೋಸ್ಟರ್ ಈಗ ಇದರ ಮುಂದುವರೆದ ಭಾಗ'ಕೆಜಿಎಫ್: ಚಾಪ್ಟರ್ 2'ಚಿತ್ರದ ಶೂಟಿಂಗ್ ಮುಗಿದಿದ್ದು ಏಪ್ರಿಲ್ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇಂದು ಯಶ್ ಹುಟ್ಟು ಹಬ್ಬ ಪ್ರಯುಕ್ತ ಹೊಸ ಪೋಸ್ಟರ್ ಬಿಡಿಗಡೆ ಮಾಡಿ ಚಿತ್ರತಂಡ ವಿಶ್ ಮಾಡಿದೆ. ಸದ್ಯ ಟೀಸರ್ನಿಂದಲೇ ದೊಡ್ಡ ದಾಖಲೆ ಬರೆದಿರೋ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆದ್ಮಲೇ ಇನ್ಯಾವ ದಾಖಲೆ ಬರೆಯಲಿದೆ ನೋಡಬೇಕು. ಇದಿಷ್ಟು ರಾಕಿ ಬಾಯ್ ಯಶಸ್ಸಿನ ಹಿಂದಿರೋ ಚಿತ್ರಗಳು.