ಕರ್ನಾಟಕ

karnataka

ಚಿರುಗೆ ಯುವ ಸಾಮ್ರಾಟ ಅಂತಾ ಬಿರುದು ಬಂದಿದ್ದು ಹೇಗೆ?: ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

By

Published : Jun 7, 2021, 2:49 PM IST

ರುದ್ರ ತಾಂಡವ ಸಿನಿಮಾದ ಮೂಲಕ ನಿರ್ದೇಶಕ ಗುರು ದೇಶಪಾಂಡೆ ಚಿರುಗೆ ಯುವ ಸಾಮ್ರಾಟ ಬಿರುದು ತಂದು ಕೊಟ್ಟಿದ್ದರು. ಡಾ ವಿಷ್ಣುವರ್ಧನ್​ ಅಭಿಮಾನಿಗಳ ಸಂಘ ಚಿರುಗೆ ಈ ಬಿರುದು ಕೊಟ್ಟು ಗೌರವಿಸಿತ್ತು.

Actor Chiranjeevi Sarja
ನಟ ಚಿರಂಜೀವಿ ಸರ್ಜಾ

ಕನ್ನಡ ಚಿತ್ರರಂಗದಲ್ಲಿ ಯುವ ಸಾಮ್ರಾಟನಾಗಿ, ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದವರು ನಟ ಚಿರಂಜೀವಿ ಸರ್ಜಾ. ಸದಾ ನಗುತ್ತಾ, ಬೇರೆಯವರನ್ನ ತಮಾಷೆ ಮಾಡುತ್ತಾ ಖುಷಿಯಾಗಿ ಇರುತ್ತಿದ್ದ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ.

ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ, ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿದ ಸುದ್ದಿ ಚಿರಂಜೀವಿ ಸರ್ಜಾ ಇನ್ನಿಲ್ಲ ಅನ್ನೋದು. 2020 ಜೂನ್​ 7ರಂದು, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಹೃದಯಾಘಾತದಿಂದ ಚಿರು ಇಹಲೋಕ ತ್ಯಜಿಸಿದರು.

ಚಿರು ಬಗೆಗಿನ ಕೆಲ ಅಚ್ಚರಿ ಸಂಗತಿಗಳು:

ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಆ್ಯಕ್ಷನ್ ಹೀರೋ ಚಿರಂಜೀವಿ ಸರ್ಜಾ ಅಭಿಮಾನಿಗಳ ಪಾಲಿಗೆ ಇನ್ನೂ ಜೀವಂತ. ಆದರೆ ವಿಜಯಕುಮಾರ್ ಆಗಿದ್ದ, ಹುಡುಗ ಕನ್ನಡ ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ಆಗಿದ್ದು ಮಾತ್ರ ಇಂಟ್ರಸ್ಟಿಂಗ್.

ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ

ವಿಜಯಕುಮಾರ್ ಎಂಬುದು ಚಿರುಗೆ ಸರ್ಜಾ ಕುಟುಂಬದಲ್ಲಿ ಮೊದಲು ಇಟ್ಟ ಹೆಸರು. ಚಿರಂಜೀವಿ ಸರ್ಜಾ, ಹಿರಿಯ ಸೋದರ ಮಾವ ಕಿಶೋರ್ ಸರ್ಜಾ ನಿರ್ದೇಶನದ ವಾಯುಪುತ್ರ ಸಿನಿಮಾದ ಮೂಲಕ ಚಿರಂಜೀವಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರೆ. ಸರ್ಜಾ ಕುಟುಂಬ ಆಂಜನೇಯನ ಭಕ್ತರಾಗಿರುವುದರಿಂದ ಈ ಚಿತ್ರಕ್ಕೆ ವಾಯುಪುತ್ರ ಎಂದು ನಾಮಕರಣ ಮಾಡ್ತಾರೆ. ತಮಿಳು ಸೂಪರ್ ಸ್ಟಾರ್ ಅರ್ಜುನ್ ಸರ್ಜಾ, ತಮಿಳಿನ ಸಂಡೇಕೋಳಿ ಚಿತ್ರದ ರಿಮೇಕ್ ವಾಯುಪುತ್ರದ ಮೂಲಕ ಚಿರಂಜೀವಿ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿ ಆ ಚಿತ್ರದ ನಿರ್ಮಾಣ ಸಹ ಮಾಡಿದ್ದರು.

ದುರಾದೃಷ್ಟವೆಂದರೆ ಚಿರಂಜೀವಿ ಸರ್ಜಾ ಹಾಗು ಹಿರಿಯ ಸೋದರ ಮಾವ ಕಿಶೋರ್ ಸರ್ಜಾ ಇಬ್ಬರು ಜೂನ್ ತಿಂಗಳಲ್ಲಿ ಬದುಕಿನ ಪಯಣವನ್ನ ಮುಗಿಸಿರುವುದು ಕಾಕತಾಳೀಯ. ಹೌದು, 2009 ಜೂನ್ 29 ರಂದು ಕಿಶೋರ್ ಸರ್ಜಾ ನಿಧನ ಹೊಂದಿದ್ದರು. 11 ವರ್ಷದ ಬಳಿಕ ಚಿರಂಜೀವಿ ಸರ್ಜಾ ಜೂ. 7ರಂದು ವಿಧಿವಶರಾಗುತ್ತಾರೆ. ಅಂದು ಕಿಶೋರ್ ಸರ್ಜಾ ಅವರ ಅಂತ್ಯಕ್ರಿಯೆ ಸೋಮವಾರ ನಡೆಸಲಾಗಿತ್ತು. ಕಾಕತಾಳೀಯ ಎಂಬಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಸೋಮವಾರವೇ ನಡೆದಿತ್ತು.

ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಮೇಘನಾ ರಾಜ್​​

ಕಿಶೋರ್ ಸರ್ಜಾ ಅಂತ್ಯಕ್ರಿಯೆ ಅವರ ತಂದೆ ಹಿರಿಯ ನಟ ಶಕ್ತಿ ಪ್ರಸಾದ್ ಸಮಾಧಿ ಇರುವ ಜಕ್ಕೇನಹಳ್ಳಿ, ಮಧುಗಿರಿ ತಾಲೂಕಿನ ಅರ್ಜುನ್ ಸರ್ಜಾ ಅವರ ಫಾರ್ಮ್ ಹೌಸ್​ನಲ್ಲಿ ನಡೆದಿತ್ತು. ಚಿರು ಅಂತ್ಯಕ್ರಿಯೆ ಕನಕಪುರ ರಸ್ತೆಯ ಧ್ರುವ ಸರ್ಜಾ ಫಾರ್ಮ್ ಹೌಸ್​ನಲ್ಲಿ ಮಾಡಲಾಗಿದೆ. 2009ರಲ್ಲಿ ಅರ್ಜುನ್ ಸರ್ಜಾ, ಅಣ್ಣ ಕಿಶೋರ್ ಸರ್ಜಾ ಸಮಾಧಿಯನ್ನ, ಕೆಂಗೇರಿಯಲ್ಲಿರುವ ಫಾರ್ಮ್ ಹೌಸ್​​ನಲ್ಲಿ ಮಾಡ್ತಾರೆ. ಅದೇ ರೀತಿ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸಮಾಧಿಯನ್ನ ಕನಕಪುರದಲ್ಲಿರೋ ಫಾರ್ಮ್ ಹೌಸ್​​ನಲ್ಲಿ ನೆರವೇರಿಸಲಾಗಿತ್ತು.

10 ವರ್ಷಗಳ ಗೆಳೆತನ:

ಚಿರು ಹಾಗೂ ಮೇಘನಾ ರಾಜ್​ ಅವರದ್ದು ಸುಮಾರು 10 ವರ್ಷಗಳ ಗೆಳೆತನ. ಮೇಘನಾ ರಾಜ್ ಕುಟುಂಬದಲ್ಲಿ ಕಷ್ಟ ಅಂತ ಬಂದಾಗ ಮೊದಲು ಹಾಜರಾಗುತ್ತಿದ್ದವರು ಚಿರಂಜೀವಿ ಸರ್ಜಾ. ಸಂಬಂಧಿಕರಿಗಿಂತ ಮೊದಲು ಚಿರಂಜೀವಿ ಸರ್ಜಾ ಕಷ್ಟಕ್ಕೆ ನೆರವಾಗುತ್ತಿದ್ದದನ್ನು ಕಂಡ ಮೇಘನಾ ರಾಜ್, ಅವರ ಸ್ನೇಹಪರ ಕಾಳಜಿಗೆ ಮಾರು ಹೋಗಿದ್ದರು. ಈ ಸ್ನೇಹವೇ ಬಳಿಕ ಪ್ರೀತಿಗೆ ತಿರುಗಿತ್ತು. ಮದುವೆಗೆ ಮುಂಚೆಯೇ ನಮ್ಮ ಮನೆಯ ಕಷ್ಟಗಳಿಗೆ ಚಿರು ಬೆಂಗಾವಲಾಗಿ ನಿಲ್ಲುತ್ತಿದ್ದರು. ಮದುವೆ ಆದ ಮೇಲೆ ಕೇಳಬೇಕೆ ಎಂದು ಮೇಘನಾ ರಾಜ್ ಹೇಳಿಕೊಂಡಿದ್ದರು. 2018 ರಲ್ಲಿ ಸಪ್ತಪದಿ ತುಳಿದ ಚಿರು-ಮೇಘನಾ ಹೆಚ್ಚು ದಿನ ಒಟ್ಟಿಗೆ ಇರಲು ಸಾಧ್ಯವಾಗಲೇ ಇಲ್ಲ.

ಪತ್ನಿ ಮೇಘನಾ ಜೊತೆ ಚಿರು

ಚಿರಂಜೀವಿ ಸರ್ಜಾ ಬಗ್ಗೆ ಧ್ರುವ ಸರ್ಜಾ ಹೇಳಿರುವ ಮಾತು ಅಂದರೆ, ಚಿರು 11 ವರ್ಷದ ವೃತ್ತಿ ಜೀವನದಲ್ಲಿ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ ನಿಜ. ಆದರೆ ಅವರು ಪ್ರತಿಯೊಂದು ಸಿನಿಮಾದಲ್ಲೂ ಕಷ್ಟ ಪಟ್ಟು ಕೆಲಸ ಮಾಡಿದ್ದರು. ಚಿರು ಸಿನಿಮಾಗಳು ಟಿವಿ ರೈಟ್ಸ್, ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದರಿಂದ ಸಿನಿಮಾಗಳ ಆಫರ್ ಕಡಿಮೆ ಆಗಿರಲಿಲ್ಲ. ಚಿರು ವೃತ್ತಿ ಜೀವನದಲ್ಲಿ ಯಾವತ್ತೂ ಕೋಪ, ಬೇಜಾರು ಮಾಡಿಕೊಂಡ ಉದಾಹರಣೆಗಳಿಲ್ಲ. ಆದರೆ ಆದ್ಯಾ ಚಿತ್ರ ಬಿಡುಗಡೆ ಬಳಿಕ ಪತ್ರಕರ್ತರನ್ನು ಭೇಟಿ ಮಾಡಿದ ಸಮಯದಲ್ಲಿ ಮಾತ್ರ ಇಂತಹ ಸಿನಿಮಾ ಸೋತು ಹೋಯಿತಲ್ಲ ಎಂದು ಬೇಜಾರು ಮಾಡಿಕೊಂಡಿದ್ದರು.

ಸೋದರ ಮಾವ ಅರ್ಜುನ್ ಸರ್ಜಾ ಜೊತೆ ಚಿರಂಜೀವಿ ಸರ್ಜಾ

ಸೋದರ ಮಾವ ಅರ್ಜುನ್ ಸರ್ಜಾ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಬೆಳೆಯುತ್ತಿದ್ದಾರೆ ಅನ್ನೋದಿಕ್ಕೆ ಈ ಘಟನೆ ಸಾಕ್ಷಿ. ವರ್ಕ್ ಔಟ್, ಜಿಮ್ ಒಂದು ದಿವಸ ಮಿಸ್ ಮಾಡದ ಚಿರಂಜೀವಿ ಸರ್ಜಾ ಒಂದು ದಿನ ವರ್ಕ್ ಔಟ್ ಮಾಡಲಿಲ್ಲ ಅಂತಾ ಮನೆಯವರು ಕೇಳಿದ್ರಂತೆ. ಹಾಗೇ ಚಿರಂಜೀವಿ ಸರ್ಜಾ, ಸ್ಟಾರ್ ಪಟ್ಟ ಹಾಗು ಬಿರುದುಗಳನ್ನ ಇಷ್ಟ ಪಡುತ್ತಿರಲಿಲ್ವಂತೆ‌. ಆದರೆ ರುದ್ರ ತಾಂಡವ ಸಿನಿಮಾದ ಮೂಲಕ ನಿರ್ದೇಶಕ ಗುರು ದೇಶಪಾಂಡೆ ಚಿರುಗೆ 'ಯುವ ಸಾಮ್ರಾಟ' ಎಂಬ ಬಿರುದು ತಂದು ಕೊಟ್ಟಿದ್ದರು. ಡಾ ವಿಷ್ಣುವರ್ಧನ್​ ಅಭಿಮಾನಿಗಳ ಸಂಘದವರು ಚಿರುಗೆ ಈ ಬಿರುದು ಕೊಟ್ಟು ಗೌರವಿಸಿದರು.

ಅರ್ಜುನ್ ಸರ್ಜಾಗೆ, ಚಿರಂಜೀವಿ ಸರ್ಜಾ ಹಾಗು ಧ್ರುವ ಸರ್ಜಾ ಜೊತೆ ಒಂದು ಪೌರಾಣಿಕ ಸಿನಿಮಾ ಮಾಡುವ ಆಸೆಯನ್ನು ಹೊಂದಿದ್ದರು. ಹೀಗಾಗಿ ಅರ್ಜುನ್ ಸರ್ಜಾ ಪೌರಾಣಿಕ ಸಿನಿಮಾ ಕತೆ ಮಾಡುವುದಾಗಿ ಹೇಳಿದರು. ಆದರೆ ಚಿರಂಜೀವಿ ಸರ್ಜಾ, ಅಗಲಿಕೆಯಿಂದ ಅರ್ಜುನ್ ಸರ್ಜಾ ಪೌರಾಣಿಕ ಸಿನಿಮಾ ಮಾಡುವ ಆಸೆಯನ್ನ ಕೈಬಿಟ್ಟಿದ್ದಾರೆ.

ABOUT THE AUTHOR

...view details