ಕನ್ನಡ ಚಿತ್ರರಂಗದ ಸುವರ್ಣ ಪುಟಗಳಿಗೆ ಅಂಟಿಕೊಂಡ ಕಳಂಕ ಅಂದ್ರೆ ಮಾಸ್ತಿಗುಡಿ ದುರಂತ. ಸ್ಯಾಂಡಲ್ವುಡ್ನಲ್ಲಿ ಇಂದಿಗೂ ಆ ಘಟನೆ ಅದೆಷ್ಟೋ ಸಾಹಸ ನಿರ್ದೇಶಕರಿಗೆ ಒಂದು ಪಾಠವಾಗಿ ಉಳಿದಿದೆ. ಉದಯ್ ಹಾಗೂ ಅನಿಲ್ ಎನ್ನುವ ಅಸಾಮಾನ್ಯ ಪ್ರತಿಭೆಗಳ ಬಲಿ ಕನ್ನಡಿಗರು ಎಂದೂ ಮರೆಯಲಾರದಂತೆ ಸಂಗತಿ.
ಅದರ ಬೆನ್ನಲ್ಲೆ ನಿನ್ನೆ ನಡೆದ 'ಲವ್ ಯೂ ರಚ್ಚು' ಸಿನಿಮಾ ಅವಘಡದಲ್ಲಿ ಯುವ ಫೈಟರ್ ವಿವೇಕ್ ಬಲಿದಾನ ನಿರ್ದೇಶಕರಿಗೆ ಬಡ ಕಲಾವಿದರ ಮೇಲಿರುವ ಅಸಡ್ಡೆಗೆ ಕೈಗನ್ನಡಿಯಾಗಿದೆ. ಹಾಗಂತ ಕನ್ನಡ ಚಿತ್ರರಂಗದಲ್ಲಿ ಸರಣಿ ಅವಘಡದ ಸಂಚಿಕೆ ಮಾಸ್ತಿಗುಡಿಯಿಂದನೇ ಆರಂಭವಾಯ್ತು ಅಂತಲ್ಲ. ಇನ್ನು 60 - 70 - 80ರದಶಕದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಅವುಗಳ ಕುರಿತು ಒಂದು ದುರಂತ ಸಿನಿ ಪಯಣದ ವಿವರ ಇಲ್ಲಿದೆ ನೋಡಿ..
ದುರಂತಕ್ಕೆ ಮುನ್ನುಡಿಯಾದ 'ಲಾಕಪ್ ಡೆತ್'
ಸಿನಿ ದರಂತಗಳ ಸಾಲಿನಲ್ಲಿ 'ಲಾಕಪ್ ಡೆತ್' ಮೊದಲು. ಡೈನಾಮಿಕ್ ಸ್ಟಾರ್ ದೇವರಾಜ್ ನಾಯಕ ನಟರಾಗಿ, ರಾಮು ನಿರ್ಮಾಣದ ಲಾಕಪ್ ಡೆತ್, ಚಿತ್ರದ ಸಾಹಸ ದೃಶ್ಯವನ್ನ ಬೆಂಗಳೂರಿನ ಎಂ.ಜಿ.ರೋಡ್ ನಲ್ಲಿ ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಾಹಸ ಕಲಾವಿದರು ಅಪಘಾತಕ್ಕೀಡಾಗಿದ್ದರು.
ಬಸ್ ಮೇಲೆ ಬೈಕ್ ಹಾರಿಸುವಾಗ ನಟ ಶಿವಕುಮಾರ್ ಹಾಗೂ ರವಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆ ಕಾಲಕ್ಕೆ ಅತೀ ಹೆಚ್ಚು ಚರ್ಚೆಗೀಡಾಗಿದ್ದ ಇನ್ಸಿಡೆಂಟ್ ಇದು.
ಬಿ.ಸಿ.ಪಾಟೀಲ್ 'ನಿರ್ಣಯ'
ಲಾಕಪ್ ಡೆತ್ ಬಳಿಕ ಬಿ.ಸಿ.ಪಾಟೀಲ್ ಅಭಿನಯದ 'ನಿರ್ಣಯ' ಚಿತ್ರದ ಶೂಟಿಂಗ ಅನ್ನು ಮಲ್ಲೇಶ್ವರದಲ್ಲಿ ನಡೆಸುತ್ತಿದ್ದಾಗ, 2 ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದವು. ಈ ವೇಳೆ, ಶೂಟಿಂಗ್ ಕ್ಯಾಮೆರಾ ಪುಡಿಯಾಗಿತ್ತು. ಅದೃಷ್ಟವಶಾತ್ ಇವೆರಡು ಪ್ರಕರಣಗಳಲ್ಲಿ ಕನ್ನಡ ಚಿತ್ರರಂಗದ ಪರವಿತ್ತು. ಸಾವು, ನೋವು ಸಂಭವಿಸಿರಲಿಲ್ಲ.
ಕ್ಯಾಮೆರಾ ಆಪರೇಟರ್ ಬಲಿ ಪಡೆದಿದ್ದ 'ಸಿಂಹದ ಮರಿ'
ಇನ್ನು 1997ರಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಸಿಂಹದ ಮರಿ' ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಅವಘಡ ಛಾಯಾಗ್ರಾಹಕ ವಿಜಿ ಅವರನ್ನ ಬಲಿ ಪಡೆಯಿತು. ಇಪ್ಪತ್ತು ಅಡಿಯಿಂದ ಖಾಕಿ ತೊಟ್ಟು ಕೆಳಗೆ ಬಿದ್ದ ಹತ್ತು ಜನ ಸಾಹಸ ಕಲಾವಿದರ ಕಾಲು ಮುರಿತಕ್ಕೊಳಗಾಯ್ತು.
ಇದಕ್ಕೂ ಮುನ್ನ 1995ರಲ್ಲಿ 'ಶಿವಸೈನ್ಯ' ಚಿತ್ರದ ಚಿತ್ರೀಕರಣದ ಸಮಯದಲ್ಲೂ ಕ್ಲ್ಯಾಪ್ ಬಾಯ್ ಆಗಿ ಕೆಲ್ಸ ಮಾಡುತ್ತಿದ್ದ ಹಿಪ್ಪಿ ರಾಮು ಛಾವಣಿ ಕುಸಿದು ಪ್ರಾಣ ಚೆಲ್ಲಿದ್ದರು.
'ಟಿಕೆಟ್ - ಟಿಕೆಟ್' ಬಾಂಬ್ ಸ್ಫೋಟಕ್ಕೆ ರವಿ ಬಲಿ
ಇಷ್ಟಕ್ಕೆ ಅವಘಡದ ಅಧ್ಯಾಯ ಕನ್ನಡ ಚಿತ್ರರಂಗದಲ್ಲಿ ಕೊನೆಯಾಗಲಿಲ್ಲ. ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಸಾಯಿಕುಮಾರ್ ಅಭಿನಯದ 'ಟಿಕೆಟ್ ಟಿಕೆಟ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕಲರ್ ಬಾಂಬ್ ಸ್ಫೋಟಗೊಂಡಿತ್ತು.