ಒಂದು ಕಾಲದಲ್ಲಿ ಸಿನಿಮಾರಂಗ ಎಂದರೆ ಅದು ಪುರುಷ ಪ್ರಧಾನ ಎಂಬ ಚಿತ್ರಣ ಇತ್ತು. ಚಿತ್ರರಂಗದ ಆರಂಭದ ದಿನಗಳಲ್ಲಿ ಮಹಿಳಾ ಪಾತ್ರವನ್ನು ಪುರುಷರೇ ನಿಭಾಯಿಸುತ್ತಿದ್ದರಂತೆ. ಆದರೆ, ಕಾಲ ಕಳೆದಂತೆ ಎಲ್ಲವೂ ಬದಲಾಯಿತು. ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ನಾಯಕಿಯರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಆರಂಭಿಸಿದರು.
ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಶಂಕರ್, ರಾಜೇಶ್ ಅಂತಹ ನಟರು ಆಗ ತಾನೇ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಕಾಲ. ಆಗ ಡಾ. ರಾಜ್ ಕುಮಾರ್ ಸೇರಿದಂತೆ ಹಲವು ನಾಯಕರಿಗೆ ಬೇಡಿಕೆ ಇದ್ದಂತ ಸಮಯ. ಅಂತಹ ದಿನಗಳಲ್ಲಿ,ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾವೊಂದು ಆರಂಭವಾಯ್ತು. ಅದೇ 'ಕಿತ್ತೂರು ರಾಣಿ ಚೆನ್ನಮ್ಮ'.
ಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ದಕ್ಷಿಣ ಚಿತ್ರರಂಗದ ಅಭಿನೇತ್ರಿ ಎಂದು ಕರೆಸಿಕೊಂಡಿದ್ದ ನಟಿ ಬಿ. ಸರೋಜಾದೇವಿ ಅವರನ್ನು ನಾಯಕಿಯನ್ನಾಗಿ ಮಾಡಿದರು. ಬಿ.ಆರ್. ಪಂತುಲು ನಿರ್ದೇಶನದ 'ಕಿತ್ತೂರು ರಾಣಿ ಚೆನ್ನಮ್ಮ' ಚಿತ್ರ 1961ರಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನಗೊಳ್ಳುವ ಮೂಲಕ ಬಿ. ಸರೋಜಾದೇವಿ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಮತ್ತು ಕೀರ್ತಿ ತಂದುಕೊಡ್ತು. ಇಂದಿಗೂ ಕಿತ್ತೂರು ರಾಣಿ ಚೆನ್ನಮ್ಮ ಅಂದರೆ ಎಲ್ಲರ ಕಣ್ಣ ಮುಂದೆ ಬರುವುದು ಬಿ. ಸರೋಜಾ ದೇವಿ.
ಅಲ್ಲಿಂದ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಜಮಾನ ಶುರುವಾಯ್ತು. ನಂತರ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ತಮ್ಮ ಎಲ್ಲಾ ಸಿನಿಮಾಗಳಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಡುವ ಸಿನಿಮಾಗಳನ್ನು ಮಾಡಿದರು ಎಂದರೆ ತಪ್ಪಿಲ್ಲ. ಬಿ. ಸರೋಜಾ ದೇವಿಯಿಂದ ಕಲ್ಪನಾ, ಆರತಿ, ಪದ್ಮಾವಾಸಂತಿ ಹಾಗೂ ಅಪರ್ಣಾ ಅವರಂತ ನಟಿಯರನ್ನು, ಮಹಿಳಾ ಪ್ರಧಾನ ನಾಯಕಿಯರನ್ನಾಗಿ ಮಾಡಿದ ಕೀರ್ತಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವ್ರಿಗೆ ಸಲ್ಲುತ್ತೆ.
1969ರಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಬಿ. ಸರೋಜಾ ದೇವಿ ಅವರನ್ನು ನಾಯಕಿಯನ್ನಾಗಿ ಮಾಡಿ 'ಮಲ್ಲಮ್ಮನ ಪವಾಡ' ಎಂಬ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ರಾಜ್ ಕುಮಾರ್ ನಟಿಸಿದ್ದರೂ ಕೂಡಾ ಅಲ್ಲಿ ಹೆಚ್ಚಿನ ಆದ್ಯತೆ ಇದ್ದದ್ದು ಬಿ. ಸರೋಜಾದೇವಿ ಅವರಿಗೆ. ಅಲ್ಲಿಂದ ಸ್ಯಾಂಡಲ್ವುಡ್ನಲ್ಲಿ ಮಹಿಳಾ ಪ್ರಧಾನ ಚಿತ್ರಗಳ ಜಮಾನ ಆರಂಭವಾಯ್ತು. ಕಲ್ಪನಾ ಅವರೊಂದಿಗೆ ಶರಪಂಜರ, 'ಗೆಜ್ಜೆಪೂಜೆ', ಆರತಿ ಜೊತೆ 'ರಂಗನಾಯಕಿ', ಪದ್ಮಾವಾಸಂತಿ ಅವರೊಂದಿಗೆ 'ಮಾನಸ ಸರೋವರ' , ಅಪರ್ಣಾ ಜೊತೆ 'ಮಸಣದ ಹೂವು', ಹೀಗೆ ಪುಟ್ಟಣ್ಣ ಕಣಗಾಲ್ ಅವರು ಮಹಿಳಾ ಪ್ರಧಾನ ಸಿನಿಮಾಗಳನ್ನು ಹೆಚ್ಚಾಗಿ ಮಾಡಿದರು.
ಈ ನಟಿಯರ ನಂತರ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚಿದ ನಟಿ ಮಾಲಾಶ್ರೀ. 1989ರಲ್ಲಿ ರಿಲೀಸ್ ಆದ ಸೂಪರ್ ಹಿಟ್ ಸಿನಿಮಾ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಲಾಶ್ರೀ ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿಬಿಟ್ಟರು. ಮಾಲಾಶ್ರಿ ಒಂದು ಕಡೆ ಗ್ಲ್ಯಾಮರ್ ನಟಿಯಾಗಿ ಅಭಿನಯಿಸಿದ್ರೆ, ಮತ್ತೊಂದು ಕಡೆ ಆ್ಯಕ್ಷನ್ ಹೀರೋಯಿನ್ ಆಗಿ ಯಶಸ್ವಿ ಆಗಿದ್ದಾರೆ. ಎಸ್ಪಿ ಭಾರ್ಗವಿ, ಸರ್ಕಲ್ ಇನ್ಸ್ಪೆಕ್ಟರ್, ಸಿಬಿಐ ದುರ್ಗಾ, ಸಾಹಸಿ, ಲೇಡಿ ಟೈಗರ್, ಚಾಮುಂಡಿ, ಕಿರಣ್ ಬೇಡಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಾಲಾಶ್ರೀ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ತುಪ್ಪದ ಹುಡುಗಿ ಎಂದೇ ಫೇಮಸ್ ಆದ ರಾಗಿಣಿ ದ್ವಿವೇದಿ 'ವೀರ ಮದಕರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗೆಲುವಿನ ಅಕೌಂಟ್ ಓಪನ್ ಮಾಡಿದರು. ಆರಂಭದಲ್ಲಿ ಗ್ಲ್ಯಾಮರ್ ನಟಿಯಾಗಿ ಕನ್ನಡ ಸ್ಟಾರ್ ನಟರ ಜೊತೆ ರೊಮ್ಯಾನ್ಸ್ ಮಾಡಿದ ರಾಗಿಣಿ, 2004 ರಿಂದ ಮಾಲಾಶ್ರಿ ಅವರಂತೆ 'ರಾಗಿಣಿ ಐಪಿಎಸ್' ಸಿನಿಮಾಗಳ ಮೂಲಕ ಆ್ಯಕ್ಷನ್ ಕ್ವೀನ್ ಆದ್ರು. ಈ ಚಿತ್ರದ ಬಳಿಕ 'ವೀರ ರಣಚಂಡಿ', 'ನಮಸ್ತೆ ಮೇಡಂ', 'ದಿ ಟೆರರಿಸ್ಟ್' ಹೀಗೆ ನಾಯಕಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ರಾಗಿಣಿ.
ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ ಕೂಡಾ ಈಗ ಮಹಿಳಾ ಪ್ರಧಾನ ಚಿತ್ರಗಳ ಕಡೆ ಹೆಚ್ಚು ಒಲವು ತೋರಿದ್ದಾರೆ. 'ಸ್ವೀಟಿ' ಚಿತ್ರದ ನಂತರ ಆ್ಯಕ್ಟಿಂಗ್ನಿಂದ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ, 'ದಮಯಂತಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ ರೀ ಎಂಟ್ರಿ ಕೊಟ್ಟಿದ್ದಾರೆ. ಅದೂ ಕೂಡಾ ಮಹಿಳಾ ಪ್ರಧಾನ ಚಿತ್ರದೊಂದಿಗೆ. ಇದರೊಂದಿಗೆ 'ಭೈರಾದೇವಿ' ಅಂತಹ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಕೂಡಾ ರಾಧಿಕಾ ಮಿಂಚಿದ್ದಾರೆ.
'ಉಗ್ರಂ' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಬ್ಯೂಟಿಕ್ವೀನ್ ಹರಿಪ್ರಿಯಾ 'ನೀರ್ ದೋಸೆ' ಚಿತ್ರದಲ್ಲಿ ಬೋಲ್ಡ್ ಆ್ಯಕ್ಟಿಂಗ್ನಿಂದ ಎಲ್ಲರನ್ನೂ ಇಂಪ್ರೆಸ್ ಮಾಡಿದರು. ನಂತರ ಅವರೂ ಕೂಡಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಇದರ ಫಲವಾಗಿ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಹರಿಪ್ರಿಯಾ ನಂತರ 'ಕನ್ನಡ್ ಗೊತ್ತಿಲ್ಲ', 'ಸೂಜಿದಾರ'ದಂತ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹರಿಪ್ರಿಯಾ ಮಾತ್ರವಲ್ಲದೆ ಪ್ರಿಯಾಂಕಾ ಉಪೇಂದ್ರ ರಚಿತಾ ರಾಮ್ ಶ್ರುತಿ ಹರಿಹರನ್, ಪಾರೂಲ್ ಯಾದವ್, ಅದಿತಿ ಪ್ರಭುದೇವ, ಪಾವನ ಗೌಡ ಹೀಗೆ ಹಲವು ನಾಯಕಿಯರು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಿಯಾಂಕ ಉಪೇಂದ್ರ ನಟಿಸಿರುವ 'ಹೌರಾ ಬ್ರಿಡ್ಜ್' ಹಾಗೂ ಅದಿತಿ ಪ್ರಭುದೇವ ಚಿತ್ರಗಳು ತೆರೆ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ. ರಚಿತಾ ರಾಮ್ ಅಭಿನಯದ 'ಏಪ್ರಿಲ್', ಪಾರೂಲ್ ಯಾದವ್ ನಟಿಸಿರುವ 'ಬಟರ್ ಫ್ಲೈ' ಚಿತ್ರಗಳು ತೆರೆಗೆ ಬರಬೇಕಿದೆ.
ಒಟ್ಟಾರೆ ಸ್ಟಾರ್ ನಟರಂತೆ ನಾಯಕಿರೂ ಕೂಡಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ ಎನ್ನುವುದಕ್ಕೆ ಈ ಸಿನಿಮಾಗಳೇ ಸಾಕ್ಷಿ.