ಚನ್ನೈ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, ಮುಗ್ಧ ವಿದ್ಯಾರ್ಥಿಗಳಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ.
ಉಡುಪಿಯಲ್ಲಿ ಪ್ರಥಮಬಾರಿಗೆ ಪ್ರಾರಂಭಗೊಂಡ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿರುವ ತಮಿಳುನಾಡಿನ ಮಕ್ಕಳ ನಿಧಿ ಮಯಂ (ಎಂಎನ್‌ಎಂ) ಸಂಸ್ಥಾಪಕ ಕಮಲ್ ಹಾಸನ್, ಕರ್ನಾಟಕದಲ್ಲಿ ಅಶಾಂತಿಯನ್ನು ಪ್ರಚೋದಿಸಲಾಗುತ್ತಿದೆ. ಇದು ಮುಗ್ಧ ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನೆರೆಯ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ತಮಿಳುನಾಡಿನಲ್ಲಿ ಆಗಬಾರದು. ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ತಮಿಳುನಾಡು ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ:ರಾಜ್ಯದ ಗಡಿ ದಾಟಿದ ಹಿಜಾಬ್-ಕೇಸರಿ ಶಾಲು ವಿವಾದ: ಮಧ್ಯಪ್ರದೇಶ, ಪುದುಚೇರಿಯಲ್ಲೂ ಕಾಣಿಸಿಕೊಂಡ ಕಿಡಿ
ಕರ್ನಾಟದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಗಳು, ಘರ್ಷಣೆ ಮತ್ತು ಲಾಠಿಚಾರ್ಜ್ ವರದಿಗಳು ವ್ಯಾಪಕವಾದ ಕಾರಣ ಇಂದಿನಿಂದ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.