ಕೆಜಿಎಫ್ ಸಿನಿಮಾ ಮೂಲಕ ಈಗ ಕನ್ನಡ ಚಿತ್ರರಂಗವು ಬೇರೆ ಭಾಷೆಯ ಸಿನಿಮಾಗಳು ಮತ್ತು ಇಂಡಸ್ಟ್ರಿಗಿಂತ ಏನೂ ಕಮ್ಮಿ ಇಲ್ಲ ಎಂಬುದು ಸಾಬೀತಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಇದರ ಬೆನ್ನಲ್ಲೇ, ಗಾಯಕ, ಸಂಗೀತ ನಿರ್ದೇಶಕ ಗಾನ ಶ್ರವಣ್ ಸ್ವಾಮೀಜಿ, ಬರೋಬ್ಬರಿ 400 ರಿಂದ 500 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದ್ದು, ಅದಿತಿ ಸಹ ನಿರ್ಮಾಪಕಿ ಆಗಿದ್ದಾರೆ.
ಕ್ರಿಷ್ಣರಾಜ- 4 :
ಈ ಬಗ್ಗೆ ಮಾತನಾಡಿದ ಗಾನ ಶ್ರವಣ್ ಸ್ವಾಮೀಜಿ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಸೇರಿ 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ. ಮೈಸೂರಿನಲ್ಲಿ 640 ಎಕರೆ ಜಮೀನು ತೆಗೆದುಕೊಂಡು ಸೆಟ್ ಹಾಕಿ ಸಿನಿಮಾ ಶೂಟ್ ಮಾಡುವ ಯೋಜನೆಯಿದೆ. ಈ ಬಹು ಕೋಟಿ ವೆಚ್ಚದ ಸಿನಿಮಾ ನಿರ್ದೇಶನವನ್ನು ಟಾಲಿವುಡ್ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿಯಂತಹ ನಿರ್ದೇಶಕರ ಕೈಯಲ್ಲಿ ಮಾಡಿಸುವ ಆಸೆಯಿದೆ. ಇಲ್ಲಾ ಅಂದರೆ ಹಾಲಿವುಡ್ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕರನ್ನು ಕರೆತರುವ ಪ್ರಯತ್ನವಿದೆ. ಕನ್ನಡದ ದೊಡ್ಡ ಸ್ಟಾರ್ ನಟರು, ತೆಲುಗು, ತಮಿಳು, ಹಿಂದಿ ಹಾಗು ಇಂಗ್ಲಿಷ್ ಸ್ಟಾರ್ ನಟರು ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗೆ ಕ್ರಿಷ್ಣರಾಜ- 4 ಎಂದು ಟೈಟಲ್ ಇಡಲಾಗಿದೆ ಎಂದು ತಿಳಿಸಿದರು. ಇದೊಂದು ಐತಿಹಾಸಿಕ ಕಥೆಯಾಗಿದ್ದು, ಗಾನ ಶ್ರವಣ್ ಸ್ವಾಮೀಜಿ ನಾಲ್ಕು ವರ್ಷದ ಹಿಂದೆಯೇ ಈ ಸಿನಿಮಾದ ಕಥೆಯನ್ನು ಬರೆದಿದ್ದಾರಂತೆ.