ಈ ಸಿನಿಮಾ ರಂಗದಲ್ಲಿ ತುಂಬಾ ಡಿಮ್ಯಾಂಡ್ನಲ್ಲಿರುವ ಯಾರಾದರೂ ಹೀರೋಯಿನ್ ಮದುವೆ ಆದ್ರೆ ಮುಗಿಯಿತು. ಅವ್ರ ಸಿನಿಮಾ ಕರಿಯರ್ ಕೂಡಾ ಮುಗಿಯಿತು ಎಂಬ ಮಾತಿದೆ. ಆದರೆ ಈಗ ಮೊದಲಿನಂತಲ್ಲ ಕಾಲ ಬದಲಾಗಿದೆ. ಮದುವೆ ನಂತರವೂ ಸ್ಯಾಂಡಲ್ವುಡ್ನ ಕೆಲ ನಟಿಮಣಿಯರು ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಆ್ಯಕ್ಟಿಂಗ್ಗೆ ನಮ್ಮ ಪ್ರಾಮುಖ್ಯತೆ ಯಾವಾಗಲೂ ಇದ್ಧೇ ಇರುತ್ತದೆ ಅಂತಾ ತೋರಿಸಿಕೊಟ್ಟಿದ್ದಾರೆ.
ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೂ ಸೂಕ್ಷ್ಮವಾಗಿ ಗಮನಿಸಿದರೆ ನಟಿಯರು ಮದುವೆ ಬಳಿಕ ನಾಯಕಿಯರಾಗಿ ಮಿಂಚಿದ್ದು ತೀರಾ ವಿರಳ. ಆದರೆ ಈಗ ಕಾಲ ಬದಲಾಗಿದೆ. ಮದುವೆ ನಂತರವೂ ನಟಿಯರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾದರೆ ಮದುವೆ ನಂತರ ಸ್ಯಾಂಡಲ್ವುಡ್ನಲ್ಲಿ ಯಾರೆಲ್ಲಾ ನಟಿಯರು ಆ್ಯಕ್ಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತನ್ನ ಸೌಂದರ್ಯದಿಂದಲೇ ಕಿಚ್ಚು ಹಚ್ಚಿದ ನಟಿ ಪ್ರಿಯಾಂಕ ಉಪೇಂದ್ರ. 2013ರಲ್ಲಿ ಉಪೇಂದ್ರ ಜೊತೆ ಹಸೆಮಣೆ ಏರಿದ ಪ್ರಿಯಾಂಕ ಉಪೇಂದ್ರ ಎರಡು ಮಕ್ಕಳು ತಾಯಿಯಾದ್ರು ಕೂಡಾ ಹೀರೋಯಿನ್ ಆಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಪ್ರಿಯಾಂಕ, 'ಮಮ್ಮಿ ಸೇವ್ ಮಿ', 'ದೇವಕಿ' 'ಸೆಕೆಂಡ್ ಆಫ್' ಈಗ 'ಉಗ್ರಾವತಾರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಾವು ಮದುವೆ ಆದ ನಂತರ ಮತ್ತೆ ನಟಿಸಲು ಉಪೇಂದ್ರ ಅವರ ಪ್ರೋತ್ಸಾಹವೇ ಕಾರಣ ಎಂದು ಪ್ರಿಯಾಂಕ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಸಿಂಡ್ರೆಲಾ ಆಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದ ನಟ ರಾಧಿಕಾ ಪಂಡಿತ್. ಮುಗ್ಧ ನಟನೆ, ತನ್ನ ಚೆಲುವಿನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ರಾಧಿಕಾ ಪಂಡಿತ್, ಯಶ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ಘೋಷಿಸಿದಾಗ ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದ್ದು ನಿಜ. ಆ ಸಮಯದಲ್ಲಿ ರಾಧಿಕಾ ಮತ್ತೆ ನಟಿಸುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ ಇದನ್ನು ಸುಳ್ಳು ಮಾಡಿದ ರಾಧಿಕಾ ಪಂಡಿತ್ ಮದುವೆ ನಂತರ ನಿರೂಪ್ ಭಂಡಾರಿ ಜೊತೆ 'ಆದಿಲಕ್ಷ್ಮಿ ಪುರಾಣ' ಸಿನಿಮಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಸದ್ಯ ಎರಡು ಮಕ್ಕಳು ತಾಯಿಯಾಗಿರುವ ರಾಧಿಕಾ ಪಂಡಿತ್, ಒಳ್ಳೆಯ ಸ್ಕ್ರಿಪ್ಟ್ ಬಂದರೆ ಖಂಡಿತ ಮತ್ತೆ ಆ್ಯಕ್ಟ್ ಮಾಡ್ತೀನಿ ಎಂದು ಹೇಳಿದ್ದಾರೆ. ಅಭಿಮಾನಿಗಳ ಆಸೆಯಂತೆ ದಂಪತಿ 'ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ' ಸೀಕ್ವೆಲ್ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ.
ತನ್ನ ಅಭಿನಯದಿಂದಲೇ ಕಮಾಲ್ ಮಾಡಿರುವ ದಕ್ಷಿಣ ಭಾರತದ ಬ್ಯೂಟಿಫುಲ್ ಹೀರೊಯಿನ್ ಎಂದು ಹೆಸರಾಗಿರುವ ನಟಿ ಪ್ರಿಯಾಮಣಿ. ಪಂಚಭಾಷೆ ನಟಿಯಾಗಿ ಮಿಂಚಿದ ಪ್ರಿಯಾಮಣಿ, ಮದುವೆ ಬಳಿಕ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಇತ್ತು. ಆದರೆ, ಮದುವೆಯಾದ ಕೆಲವು ದಿನಗಳ ನಂತ್ರ ಪ್ರಿಯಾಮಣಿ ಕ್ಯಾಮರಾ ಮುಂದೆ ನಿಂತುಕೊಂಡರು. ಮದುವೆ ನಂತರ 'ವೈಟ್' ಎಂಬ ಕಿರುಚಿತ್ರದಲ್ಲಿ ನಟಿಸಿದ್ರು. ಆ ಬಳಿಕ 'ನನ್ನ ಪ್ರಕಾರ' ಚಿತ್ರದಲ್ಲಿ ವೈದ್ಯೆಯಾಗಿ ಮಿಂಚಿದ್ರು. ಇನ್ನು 'ಡಿ 56' ಚಿತ್ರ ಬಿಡುಗಡೆಯಾಗಬೇಕಿದೆ. ಅತ್ತ ತೆಲುಗು, ತಮಿಳು ಚಿತ್ರರಂಗದಲ್ಲೂ ಪ್ರಿಯಾಮಣಿ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. ಇನ್ನು ಪತಿ ಮುಸ್ತಫಾ ರಾಜ್ ಕೂಡಾ ಪ್ರಿಯಾಮಣಿ ಸಿನಿಮಾ ಮೇಲಿನ ಪ್ರೀತಿಗೆ ಸಪೋರ್ಟ್ ಮಾಡ್ತಾ ಇದ್ದಾರಂತೆ.
ಬಹುಭಾಷೆ ನಟಿಯಾಗಿ ಬೆಳ್ಳಿ ತೆರೆ ಮೇಲೆ ಮೋಡಿ ಮಾಡಿರುವ ಮತ್ತೊಬ್ಬರು ನಟಿ ಭಾವನಾ. ಮಲಯಾಳಿ ಕುಟ್ಟಿಯಾಗಿರೋ ಭಾವನಾ ಕರ್ನಾಟಕದ ಸೊಸೆಯಾಗಿದ್ದು ಅಚ್ಚರಿ. ಎರಡು ವರ್ಷಗಳ ಹಿಂದೆ ಕನ್ನಡದ ನಿರ್ಮಾಪಕ ನವೀನ್ ಜೊತೆ ಹಸೆಮಣೆ ಏರಿದ್ರು. ಆಗ ಭಾವನಾ ಇನ್ಮುಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಭಾವನಾ ಮಾತ್ರ ಮದುವೆ ಆದ ಎರಡು ತಿಂಗಳಲ್ಲೇ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸಿದ್ದು ಅಚ್ಚರಿ ಮೂಡಿಸಿತ್ತು. ಗಣೇಶ್ ಜೊತೆ '99' ಚಿತ್ರದಲ್ಲಿ ಕೂಡಾ ಅವರು ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ', ಶಿವರಾಜ್ ಕುಮಾರ್ ಜೊತೆ 'ಭಜರಂಗಿ 2' ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
'ಡ್ರಾಮಾ', 'ಲವ್ ಇನ್ ಮಂಡ್ಯ', 'ಕಾಫಿ ವಿತ್ ವೈಫ್', 'ಜೈ ಭಜರಂಗಬಲಿ' ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಸಿಂಧು ಲೋಕನಾಥ್. ಮದುವೆ ನಂತರ ಸಿಂಧು ಲೋಕನಾಥ್ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರೆ ಅಂತಾ ಹೇಳಲಾಗಿತ್ತು. ಆದರೆ ಮದುವೆ ನಂತರ ಕೆಲವು ತಿಂಗಳ ಬಳಿಕ 'ಕಾಣದಂತೆ ಮಾಯವಾದನು' ಸಿನಿಮಾ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ರು. ಅಲ್ಲಿಂದ ಹೀಗೊಂದು ದಿನ ಚಿತ್ರದಲ್ಲೂ ಕಾಣಿಸಿಕೊಂಡರು. ಈಗ 'ಕೃಷ್ಣ ಟಾಕೀಸ್' ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ.
'ರಾಜಾಹುಲಿ' ಸಿನಿಮಾ ಖ್ಯಾತಿಯ ಮೇಘನಾ ರಾಜ್ ಕೂಡಾ ನಟ ಚಿರಂಜೀವಿ ಜೊತೆ ಸಪ್ತಪದಿ ತುಳಿದ್ರು. ಮದುವೆ ಬಳಿಕ ಮೇಘನಾ ರಾಜ್ ಕೂಡಾ ಮತ್ತೆ ನಟಿಸೋದು ಡೌಟ್ ಎನ್ನಲಾಗಿತ್ತು. ಆದರೆ ಮೇಘನಾ ರಾಜ್ ಉಪೇಂದ್ರ ಹಾಗೂ ಸೃಜನ್ ಲೋಕೇಶ್ ಚಿತ್ರಗಳಿಗೆ ನಾಯಕಿಯಾಗಿದ್ದಾರೆ. ಇವರೊಂದಿಗೆ ಮದುವೆ ಆಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್. 'ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ' ಚಿತ್ರದ ಮೂಲಕ ಶ್ವೇತಾ ಶ್ರೀವಾತ್ಸವ್ ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ನಟಿಯಾಗಿ ಮಿಂಚಿದ್ರು. 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ ನಂತ್ರ ಬ್ರೇಕ್ ಪಡೆದಿದ್ದ ಶ್ವೇತಾ ಶ್ರೀವಾತ್ಸವ್ 'ರಹದಾರಿ' ಸಿನಿಮಾ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.
ಇವರಷ್ಟೇ ಅಲ್ಲ, ನಟಿಯರಾದ ಮಾನಸ ಜೋಶಿ, ಸೋನುಗೌಡ, ಶ್ರುತಿ ಹರಿಹರನ್ ಹಾಗೂ ಇನ್ನಿತರರು ಮದುವೆ ನಂತರವೂ ನಾಯಕಿಯರಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. ಒಟ್ಟಾರೆ ಸಿನಿಮಾ ರಂಗದಲ್ಲಿ ಸಕ್ಸಸ್ಫುಲ್ ಹೀರೋಯಿನ್ ಆಗಿ ಹೊರ ಹೊಮ್ಮಿದ ನಾಯಕಿಯರು ಮದುವೆ ನಂತರವೂ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದರಿಂದ ಅವರಿಗೆ ಸಿನಿಮಾ ಮೇಲಿರುವ ವ್ಯಾಮೋಹ ಎಷ್ಟಿದೆ ಎಂಬುದು ತಿಳಿಯುತ್ತದೆ.