ಹಿರಿಯ ನಿರ್ದೇಶಕ ದಿನೇಶ್ ಬಾಬು 50ನೇ ಚಿತ್ರ 'ಕಸ್ತೂರಿ ಮಹಲ್'ಗೆ ಕೊನೆಗೂ ನಾಯಕಿ ಫಿಕ್ಸ್ ಆಗಿದ್ದಾರೆ. ರಚಿತಾ ರಾಮ್ ಈ ಚಿತ್ರದಿಂದ ಹೊರ ಹೋದ ನಂತರ ಚಿತ್ರಕ್ಕೆ ಹರಿಪ್ರಿಯಾ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹರಿಪ್ರಿಯಾ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿಲ್ಲ.
ರಚಿತಾ, ಹರಿಪ್ರಿಯಾ ಬಿಟ್ಟು 'ಕಸ್ತೂರಿ ಮಹಲ್'ಗೆ ಬರ್ತಿರೋ ನಾಯಕಿ ಇವರೇ...! - Shanvi Srivatsav for Kasturi mahal
ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 5 ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ರುಬಿನ್ ರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ತಮ್ಮ ಚಿತ್ರಕ್ಕಾಗಿ ದಿನೇಶ್ ಬಾಬು ಶಾನ್ವಿ ಶ್ರೀ ವಾತ್ಸವ್ ಅವರನ್ನು ಕರೆ ತಂದಿದ್ದಾರೆ. ಹರಿಪ್ರಿಯಾ ಈ ಚಿತ್ರದಲ್ಲಿ ನಟಿಸಲು ಹೆಚ್ಚು ಸಂಭಾವನೆ ಕೇಳಿದ್ದರಿಂದ ಕೊನೆಗೆ 'ಕಸ್ತೂರಿ ಮಹಲ್'ಗೆ ಶಾನ್ವಿ ಶ್ರೀವಾತ್ಸವ್ ಅವರನ್ನು ಫಿಕ್ಸ್ ಮಾಡಲಾಗಿದೆ. ಕಳೆದ ತಿಂಗಳು ದಿನೇಶ್ ಬಾಬು 'ಕಸ್ತೂರಿ ಮಹಲ್' ಚಿತ್ರದ ಮಹೂರ್ತ ನೆರವೇರಿಸಿದ್ದರು. ಆ ವೇಳೆ ರಚಿತಾ ರಾಮ್ ಕೂಡಾ ಹಾಜರಿದ್ದರು. ಆದರೆ ಚಿತ್ರೀಕರಣ ಆರಂಭವಾಗಬೇಕು ಎಂದುಕೊಳ್ಳುವಷ್ಟರಲ್ಲಿ ರಚಿತಾ ನಿಗೂಢ ಕಾರಣ ಹೇಳಿ ಚಿತ್ರದಿಂದ ಹೊರನಡೆದಿದ್ದರು. ನಂತರ ಹರಿಪ್ರಿಯಾ ಚಿತ್ರಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶಾನ್ವಿ ಶ್ರೀ ವಾತ್ಸವ್ ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಲಿದ್ದಾರೆ.
'ಕಸ್ತೂರಿ ಮಹಲ್' ಚಿತ್ರಕ್ಕೆ ಆರಂಭದಲ್ಲಿ 'ಕಸ್ತೂರಿ ನಿವಾಸ' ಎಂದು ಹೆಸರಿಡಲಾಗಿತ್ತು. ಆದರೆ ಡಾ. ರಾಜ್ಕುಮಾರ್ ಸಿನಿಮಾಗಳ ಹೆಸರನ್ನು ಬಳಸಬಾರದು ಎಂಬ ಅಭಿಮಾನಿಗಳ ಒತ್ತಾಯದ ಮೇರೆಗೆ ಹಾಗೂ 'ಕಸ್ತೂರಿ ನಿವಾಸ' ಚಿತ್ರದ ನಿರ್ದೇಶಕ ಭಗವಾನ್ ಸಲಹೆ ಮೇರೆಗೆ ಚಿತ್ರಕ್ಕೆ 'ಕಸ್ತೂರಿ ಮಹಲ್' ಎಂದು ಹೆಸರಿಡಲಾಗಿದೆ. ಅಕ್ಟೋಬರ್ 5 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಪ್ಯಾರಾನಾರ್ಮಲ್ ಚಟುವಟಿಕೆ ಬಗ್ಗೆ ಹೆಣೆದಿರುವ ಕಥೆಗೆ ರುಬಿನ್ ರಾಜ್ ಬಂಡವಾಳ ಹೂಡಿದ್ದಾರೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.