ಬಾಲಿವುಡ್ ನಟ ಸಲ್ಮಾನ್ ಖಾನ್ 2003 ರಲ್ಲಿ ಜೋಧ್‌ಪುರ ಸೆಷನ್ಸ್ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. 1998 ರಲ್ಲಿ ಜೋಧಪುರದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣದ ವಿಚಾರಣೆಯಲ್ಲಿ ಸಲ್ಮಾನ್ ಕ್ಷಮೆಯಾಚಿಸಿದ್ದಾರೆ. ಈ ಪ್ರಕರಣದ ಅಂತಿಮ ತೀರ್ಪು ನಾಳೆ (ಗುರುವಾರ) ಪ್ರಕಟವಾಗಲಿದೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೋಧ್‌ಪುರ ಸೆಷನ್ಸ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಆಗಸ್ಟ್ 8, 2003 ರಂದು ಕೋರ್ಟ್ಗೆ ಸಲ್ಲಿಸಿದ್ದ ಅಫಿಡವಿಟ್ ತಪ್ಪಾಗಿದೆ ಎಂದು ಸಲ್ಮಾನ್ ಪರ ವಕೀಲ ಹಸ್ತಿಮಲ್ ಸರಸ್ವತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಪ್ಪು ಅಫಿಡೆವಿಟ್ ನೀಡಿರುವ ಬಗ್ಗೆ ವಿವರಣೆ ನೀಡಿರುವ ಸರಸ್ವತ್, "ಆಗಸ್ಟ್ 8, 2003 ರಂದು ಅಫಿಡವಿಟ್ ಅನ್ನು ತಪ್ಪಾಗಿ ನೀಡಲಾಗಿದೆ. ಸಲ್ಮಾನ್ ಆ ಸಂದರ್ಭದಲ್ಲಿ ಕೆಲಸಗಳ ಮಧ್ಯೆ ಬ್ಯುಸಿಯಾಗಿದ್ದ ಕಾರಣ ತಾವು ತಮ್ಮ ಬಂದೂಕಿನ ಪರವಾನಗಿಯನ್ನು ರಿನಿವಲ್ಗೆ ನೀಡಿರುವುದನ್ನು ಮರೆತು, ಪರವಾನಗಿ ಕಳೆದು ಹೋಗಿದೆ." ಎಂದು ಸಲ್ಮಾನ್ ಹೇಳಿರುವದಾಗಿ ತಿಳಿಸಿದ್ದಾರೆ.
ಜೋಧ್‌ಪುರದ ಬಳಿಯ ಕಂಕಣಿ ಗ್ರಾಮದಲ್ಲಿ 1998 ರಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ರು. ಆ ಸಮಯದಲ್ಲಿ ಸಲ್ಮಾನ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ಸಲ್ಲಿಸುವಂತೆ ಕೇಳಿತ್ತು.
ನಂತರ ಸಲ್ಮಾನ್ ಅವರು ಪರವಾನಗಿ ಕಳೆದುಕೊಂಡಿದ್ದಾರೆ ಎಂದು 2003 ರಲ್ಲಿ ನ್ಯಾಯಾಲಯದಲ್ಲಿ ಅಫಿಡವಿಟ್ ನೀಡಿದ್ದರು. ಈ ಸಂಬಂಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಂತರದ ದಿನಗಳಲ್ಲಿ ಬಂದೂಕು ಪರವಾನಗಿ ಕಳೆದು ಹೋಗಿಲ್ಲ ಬದಲಾಗಿ, ನವೀಕರಣಕ್ಕೆ ಕೊಡಲಾಗಿದೆ ಎಂಬುದು ನ್ಯಾಯಾಲಯಕ್ಕೆ ತಿಳಿದು ಬಂದಿದೆ.