ಕಮರ್ಷಿಯಲ್ ಸಿನಿಮಾಗಳಲ್ಲೇ ಕಳೆದು ಹೋಗಿರುವ ಕಲಾವಿದರು ಆಗಾಗ್ಗೆ ಕಲಾತ್ಮಕ ಚಿತ್ರಗಳತ್ತ ಮುಖ ಮಾಡುತ್ತಾರೆ. ಕೆಲವು ಕಥಾ ವಸ್ತುಗಳು ಅವರಿಗಾಗಿಯೇ ಇವೆ. ಅವನ್ನು ಆಯ್ಕೆ ಮಾಡಿಕೊಂಡು ಡಾ. ಜಯಮಾಲಾ "ತಾಯಿ ಸಾಹೇಬ" ಹಾಗೂ ತಾರಾ ಅನುರಾಧ ‘ಹಸೀನಾ’ ಚಿತ್ರದಿಂದ ರಾಷ್ಟ್ರ ಪ್ರಶಸ್ತಿ ಸಹ ಪಡೆದುಕೊಂಡರು.
ನಟಿ ಸೌಂದರ್ಯ ‘ದ್ವೀಪ’, ಉಮಾಶ್ರೀ ‘ಗುಲಾಬಿ ಟಾಕೀಸ್’ ಚಿತ್ರಗಳಲ್ಲಿ ಅಭಿನಯಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಪವಿತ್ರ ಲೋಕೇಶ್ ‘ನಾಯಿ ನೆರಳು’ ಸಿನಿಮಾದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆಯುವುದರಲ್ಲಿ ಮಿಸ್ ಆದರು. ನಟಿ ಭಾವನಾ ಅವರು ಬರಗೂರು ರಾಮಚಂದ್ರಪ್ಪ ಅವರ ‘ಶಾಂತಿ’ ಸಿನಿಮಾದಲ್ಲಿ ನಟಿಸಿ ವಿಶ್ವಮಟ್ಟದಲ್ಲಿ ಹೆಸರು ಗಳಿಸುವಂತೆ ಆಯಿತು.
ಈಗ 13ನೇ ಶತಮಾನದ ಕಥೆಯೊಂದಿಗೆ ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಬರುತ್ತಿರುವ ‘ಅಮೃತಮತಿ’ ಚಿತ್ರಕ್ಕೆ ಹರಿಪ್ರಿಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಮೃತಮತಿ ರಾಜ ವೈಭೋಗದಿಂದ ಬೇಸರ ಉಂಟಾಗಿರುವ ರಾಣಿ ಮನಸ್ಸು ಅಷ್ಟವಂಕನ ರಾಗಕ್ಕೆ ಸೋಲುತ್ತದೆ. ದೇಹ ಹಾಗೂ ಮನಸುಗಳ ವೈರುಧ್ಯವನ್ನು ಬರಗೂರು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಹರಿಪ್ರಿಯಾ ಅವರ ಮತ್ತೊಂದು ಚಾರಿತ್ರಿಕ ಸಿನಿಮಾ ‘ಬಿಚ್ಚುಗತ್ತಿ’ ಬಿಡುಗಡೆಗೆ ಸಿದ್ಧತೆಯ ಮಾಡಿಕೊಳ್ಳುತ್ತಿದೆ. ಮಾಯಾವಿಯಾಗಿ ‘ಕುರುಕ್ಷೇತ್ರ’ ಚಿತ್ರದಲ್ಲಿ ಹರಿಪ್ರಿಯಾ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ ಅವರ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಸೃಜನ್ ಲೋಕೇಶ್ ಜೊತೆ 'ಎಲ್ಲಿದ್ದೆ ಇಲ್ಲಿ ತನಕ" , ಕಿರಣ್ ರಾಜ್ ನಿರ್ದೇಶನದ "ಕಥಾ ಸಂಗಮ" ಸಿನಿಮಾಗಳು ವಿವಿಧ ಹಂತಗಳಲ್ಲಿವೆ.